ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ ಮೇಲ್ಛಾವಣಿ ಕುಸಿತ – 8 ಮಂದಿ ದುರ್ಮರಣ
ಲಕ್ನೋ: ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ (Potato Cold Storage) ಮೇಲ್ಛಾವಣಿ (Roof) ಕುಸಿದು ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್ ಚಂದೌಸಿ ಪ್ರದೇಶದಲ್ಲಿ ನಡೆದಿದೆ.
ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ ಮಾಲೀಕರನ್ನು ಅಂಕುರ್ ಅಗರ್ವಾಲ್ ಮತ್ತು ರೋಹಿತ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಹಿಂದೆಯೇ ಕೋಲ್ಡ್ ಸ್ಟೋರೇಜ್ ಶಿಥಿಲಾವಸ್ಥೆಯಲ್ಲಿದೆ ಎಂದು ವರದಿಯಾಗಿತ್ತು. ಆದರೆ ಕಟ್ಟಡ ಕುಸಿತಕ್ಕೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಮೊರಾಬಾದ್ ಡಿಐಜಿ ಶಲಭ್ ಮಾಥುರ್ ಮಾತನಾಡಿ, ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 11 ಮಂದಿಯನ್ನು ರಕ್ಷಿಸಲಾಗಿದೆ. ಕಟ್ಟಡದಲ್ಲಿ ನೆಲಮಾಳಿಗೆಯಿದ್ದು, ಅಲ್ಲಿಯೂ ಯಾರಾದರೂ ಸಿಲುಕಿಕೊಂಡಿದ್ದಾರಾ ಎಂದು ಹುಡುಕುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಅವಶೇಷಗಳಡಿ ಸಿಲುಕಿರುವ ಜನರನ್ನು ಹುಡುಕಲು ಅಧಿಕಾರಿಗಳು ಸ್ನಿಫರ್ ಡಾಗ್‍ಗಳನ್ನು ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಘಟನೆಗೆ ಸಂಬಂಧಿಸಿ ಕೋಲ್ಡ್ ಸ್ಟೋರೇಜ್‍ನ ಮಾಲೀಕ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಾಪತ್ತೆಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.