ಆಗಸ್ಟ್ 18 ರಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಣೆ - ಶಿಕ್ಷಣ ಸಚಿವ ಮಧುಬಂಗಾರಪ್ಪ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರವು ವಾರದಲ್ಲಿ ಎರಡು ದಿನ ಮೊಟ್ಟೆ ಮತ್ತು ಬಾಳೆಹಣ್ಣುಗಳನ್ನು ವಿತರಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬುಧವಾರ ಹೇಳಿದ್ದಾರೆ.ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು ವಿತರಿಸುವ ಯೋಜನೆ ಆ.18ರಿಂದ ಜಾರಿಗೆ ಬರಲಿದೆ. ಮೊದಲು ಮಂಡ್ಯ ಜಿಲ್ಲೆಯಲ್ಲಿ ಈ ಯೋಜನೆ ಉದ್ಘಾಟನೆಯಾಗಲಿದೆ ಎಂದರು.
“ಈ ಹಿಂದೆ, ಯೋಜನೆಯನ್ನು 8ನೇ ತರಗತಿಯವರೆಗೆ ವಿಸ್ತರಿಸಲು ಯೋಜಿಸಲಾಗಿತ್ತು. ಇದೀಗ ಈ ಯೋಜನೆಯನ್ನು 10ನೇ ತರಗತಿವರೆಗೆ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ’ ಎಂದು ಸಚಿವರು ತಿಳಿಸಿದ್ದಾರೆ.
ಮಧ್ಯಾಹ್ನದ ಊಟದ ಜತೆಗೆ ಮೊಟ್ಟೆ, ಬಾಳೆಹಣ್ಣು ನೀಡಲಾಗುವುದು ಎಂದು ಮಧು ಬಂಗಾರಪ್ಪ ಅವರು ಹೇಳಿದ್ದಾರೆ.ಈ ಹಿಂದೆ ರಾಜ್ಯ ಸರ್ಕಾರದ ಈ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ನಿರ್ಧಾರವು ಸಮಾಜದ ಒಂದು ವರ್ಗವನ್ನು ಕೆರಳಿಸಿತ್ತು. ಈ ಯೋಜನೆ ಶಾಲೆಗೆ ಹೋಗುವ ಮಕ್ಕಳಲ್ಲಿ ತಾರತಮ್ಯವನ್ನು ಉಂಟು ಮಾಡುತ್ತದೆ. ಹೀಗಾಗಿ ಶಾಲಾ ಆವರಣದಲ್ಲಿ ಮೊಟ್ಟೆಗಳನ್ನು ವಿತರಿಸಬಾರದು ಎಂದು ಒತ್ತಾಯಿಸಲಾಗಿತ್ತು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸ್ಥಗಿತಗೊಳ್ಳಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಕೆಎಸ್ಆರ್ಟಿಸಿ
ಬೆಂಗಳೂರು, ಆಗಸ್ಟ್ 16: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ನಿಲ್ಲಿಸುವುದಾಗಿ ಊಹಾಪೋಹಗಳು ಕೇಳಿಬಂದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಸ್ಥಗಿತಗೊಳ್ಳಲ್ಲ ಎಂದು ಸ್ಪಷ್ಟನೆ ನೀಡಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಮುಂದುವರಿಯುತ್ತೆ. ಯಾವುದೇ ಗೊಂದಲದ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಸ್ಥಗಿತಗೊಳ್ಳಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಅಂತ್ಯದ ಬಳಿಕ ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆ ನಿಲ್ಲಿಸಲಾಗುತ್ತೆ ಎಂಬ ಊಹಾಪೋಹ ಹಬ್ಬಿಸುತ್ತಿದ್ದಾರೆ. ಒಂದು ಪಕ್ಷದವರು ಇಂತಹ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.