ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ನೀಡಿಲ್ಲ ; ಈ ತಿಂಗಳ ಉಚಿತ ವಿದ್ಯುತ್ತಿಗೆ ಜುಲೈ 25 ರ ಒಳಗೆ ಅರ್ಜಿ ಸಲ್ಲಿಸಬೇಕು - ಕೆ. ಜೆ ಜಾರ್ಜ್ ಸ್ಪಷ್ಟನೆ
ಬೆಂಗಳೂರು: ‘ಗೃಹಜ್ಯೋತಿ’ ಯೋಜನೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು. ವಿಧಾನಸಭೆಯಲ್ಲಿ ಬುಧವಾರ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಇಂಧನ ಸಚಿವರು ”ಅರ್ಜಿ ಸಲ್ಲಿಕೆಗೆ ಯಾವುದೇ ಕಾಲಮಿತಿ ನೀಡಿಲ್ಲ,” ಎಂದು ಸ್ಪಷ್ಟಪಡಿಸಿದರು. ” ಜುಲೈ ತಿಂಗಳ ಸೌಲಭ್ಯ ಪಡೆಯಲು ಇದೇ ಜುಲೈ 25, 26 ರವರೆಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್ ಮೊದಲ ವಾರದಲ್ಲಿ ಬಿಲ್ ಸೃಜನೆಯಾಗಲಿದೆ. ಎರಡು ತಿಂಗಳ ಬಳಿಕ ಎಲ್ಲ ವಿದ್ಯುತ್ ಕಚೇರಿಗಳಲ್ಲಿಅದಾಲತ್ ಆಯೋಜಿಸಿ ಎಲ್ಲಅರ್ಹರಿಗೂ ಸೌಲಭ್ಯ ಕಲ್ಪಿಸುವ ಕೆಲಸ ಮಾಡಲಾಗುವುದು,” ಎಂದು ತಿಳಿಸಿದರು.
”ಈ ನಡುವೆ, ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಯೋಜನೆಯಡಿ ಮಾಸಿಕ 40 ಯೂನಿಟ್ ಹಾಗೂ ‘ಅಮೃತಜ್ಯೋತಿ’ ಯೋಜನೆಯಡಿ ಪರಿಶಿಷ್ಟ ಬಿಪಿಎಲ್ ಕುಟುಂಬಕ್ಕೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವಿದೆ. ಇವುಗಳ ಫಲಾನುಭವಿಗಳಿಗೂ ಗೃಹಜ್ಯೋತಿ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತಿದೆ. ಇದರಿಂದ ಯೋಜನೆ ವ್ಯಾಪ್ತಿಗೆ ಇನ್ನೂ 40 ಲಕ್ಷ ಫಲಾನುಭವಿಗಳು ಸೇರ್ಪಡೆಯಾಗಲಿದ್ದಾರೆ,” ಎಂದು ವಿವರಿಸಿದರು.
ಆಕ್ಷೇಪಗಳಿಗೆ ಸದನದಲ್ಲೇ ಸಚಿವರ ಸ್ಪಷ್ಟನೆ
‘ಗೃಹಜ್ಯೋತಿ’ ಯೋಜನೆ ಸೌಲಭ್ಯ ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಕೆಲ ಆಕ್ಷೇಪಗಳಿಗೆ ಸರಕಾರ ಸದನದಲ್ಲೇ ಸ್ಪಷ್ಟನೆ ನೀಡಿತು.
” ಮುಖ್ಯವಾಗಿ ‘ಗೃಹಜ್ಯೋತಿ’ಗೆ 2.16 ಕೋಟಿ ಫಲಾನುಭವಿಗಳಿದ್ದು, ಈವರೆಗೆ 2.16 ಕೋಟಿ ಗ್ರಾಹಕರಿದ್ದು, ಅವರಿಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಿಸಲಾಗಿತ್ತು. ಈಗ ವಾರ್ಷಿಕ ಸರಾಸರಿ ಬಳಕೆ ಪ್ರಮಾಣದ ಮೇಲೆ ಶೇ. 10ರಷ್ಟು ಉಚಿತ ಎನ್ನುವುದು ಎಷ್ಟು ಸರಿ,” ಎಂದು ಎಚ್ಡಿಕೆ ಪ್ರಶ್ನಿಸಿದರು.
ಅದಕ್ಕೆ ಸಿಎಂ ಸಿದ್ದರಾಮಯ್ಯ, ” 200 ಯೂನಿಟ್ವರೆಗೆ ಉಚಿತ ವಿದ್ಯುತ್ ಎಂದಿದ್ದೇವೆ. ವರ್ಷವಿಡೀ ಸರಾಸರಿ 120 ಯೂನಿಟ್ ಬಳಸುತ್ತಿದ್ದರೆ ಅವರಿಗೆ 200 ಯೂನಿಟ್ವರೆಗೆ ಉಚಿತ ಏಕೆ, ” ಎಂದು ಪ್ರಶ್ನೆ ಮಾಡಿದರು.