ನಿಮ್ಮ ಟ್ರೋಲ್ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ; ಕ್ರಿಕೆಟಿಗ ಚಹಾಲ್ ಪತ್ನಿ ಧನಶ್ರಿ ವರ್ಮಾ..!
ಕ್ರಿಕೆಟಿಗ ಯಜುವೇಂದ್ರ ಚಹಾಲ್(Yuzvendra Chahal) ಹಾಗೂ ಪತ್ನಿ ಧನಶ್ರಿ ವರ್ಮಾ(Dhanashree Verma) ದಾಂಪತ್ಯ ಜೀವನ ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಚರ್ಚೆಯಾಗಿದೆ. ಹಲವು ಬಾರಿ ಟ್ರೋಲ್(Troll), ಟೀಕೆಗೆ ಒಳಗಾಗಿದೆ. ಇತ್ತೀಚೆಗೆ ಧನಶ್ರೀ ವರ್ಮಾ ಕೊರಿಯಾಗ್ರಾಫರ್ ಪ್ರತೀಕ್ ಉತ್ಕೇಕರ್(Pratik Utekar) ಜೊತೆಗಿನ ಫೋಟೋ ಪೋಸ್ಟ್ ಮಾಡಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದರು. ಇಷ್ಟು ದಿನ ಯಾವುದೇ ಟ್ರೋಲ್, ಟೀಕೆಗೆ ತಲೆಕೆಡಿಸಿಕೊಳ್ಳದ ಧನಶ್ರೀ ವರ್ಮಾ ಇದೀಗ ಭಾವುಕರಾಗಿದ್ದಾರೆ. ನಿಮ್ಮ ಟ್ರೋಲ್ ನನ್ನ ವೈಯುಕ್ತಿಕ ಜೀವನ, ಕುಟುಂಬದ ಮೇಲೆ ಪರಿಣಾಮ ಬೀರಿದೆ ಎಂದು ಧನಶ್ರಿ ವರ್ಮಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ಪೋಸ್ಟ್ ಮಾಡಿದ ಧನಶ್ರೀ ವರ್ಮಾ ಸುದೀರ್ಘವಾಗಿ ಮಾತನಾಡಿದ್ದಾರೆ. ಒಂದು ಫೋಟೋಗೆ ಕಮೆಂಟ್ ಮಾಡುವಾಗ ಎಚ್ಚರವಹಿಸಬೇಕು. ನಿಮ್ಮ ಟ್ರೋಲ್, ಕಮೆಂಟ್‌ಗಳಿಂದ ನನ್ನ ಕುಟುಂಬ ತೀವ್ರ ನೋವು ಅನುಭವಿಸುವಂತಾಯಿತು. ಇದರಿಂದ ನನಗೂ ತೀವ್ರ ನೋವಾಗಿದೆ. ಇದುವರೆಗೂ ನಾನು ಟ್ರೋಲ್‌ಗಳಿಗೆ ತಲೆಕೆಡಿಸಿಕೊಂಡಿಲ್ಲ. ಆದರೆ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿರುವ ಕಾರಣ ಈ ವಿಚಾರ ಮಾತನಾಡಲಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಧನಶ್ರೀ ವರ್ಮಾ ಜಲಕ್ ದಿಕ್‌ಲಾಜಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕೋರಿಯಾಗ್ರಫರ್ ಪ್ರತೀಕ್ ಉತ್ಕೇಕರ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮೊದಲೇ ಚಹಾಲ್ ಜೊತೆಗಿನ ಸಂಬಂಧ ಹಳಸಿದೆ ಅನ್ನೋ ಊಹಾಪೋಹದ ಮಾತುಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಈ ಫೋಟೋ ಟ್ರೋಲರ್ಸ್‌ಗೆ ಆಹಾರವಾಗಿತ್ತು.
ಟ್ರೋಲ್, ಮೀಮ್ಸ್ , ಕಮೆಂಟ್‌ಗಳನ್ನು ನೋಡಿ ನಗುತ್ತಿದ್ದೆ. ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನನ್ನ ಕುಟುಂಬ ಈ ಟ್ರೋಲ್ ಹಾಗೂ ಕಮೆಂಟ್‌ನಿಂದ ನೋವು ಅನುಭವಿಸಿದೆ. ಸಂಬಂಧಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ನೀವು ಟ್ರೋಲ್ ಮಾಡುವ ಮೊದಲು ಮಾನವರಾಗಿ ಯೋಚಿಸಿ,ಅಮೇಲೆ ಟ್ರೋಲ್ ಮಾಡಿ. ನಿಮಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಲು, ಅಭಿಪ್ರಾಯ ವ್ಯಕ್ತಪಡಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ನಮ್ಮ ಭಾವನೆಗಳು, ನಮ್ಮ ಕುಟುಂಬ, ನಮ್ಮ ಖಾಸಗೀತನದ ಬಗ್ಗೆ ಯೋಚಿಸಿದ್ದೀರಾ? ಎಂದು ಚಹಾಲ್ ಪತ್ನಿ ಪ್ರಶ್ನಿಸಿದ್ದಾರೆ.
ಸಣ್ಣ ಟ್ರೋಲ್, ಕಮೆಂಟ್ ದೊಡ್ಡ ಪ್ರಮಾಣದಲ್ಲಿ ದ್ವೇಷ ಹರಡುತ್ತಿದೆ. ಸಾಮಾಜಿಕ ಮಾಧ್ಯಮ ನನ್ನ ಕೆಲಸದ ಭಾಗವಾಗಿದೆ. ನಾನು ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಧೈರ್ಯಮಾಡಿಕೊಂಡು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಈ ಮಾತು ಹೇಳುತ್ತಿದ್ದೇನೆ. ನನ್ನ ಕಳಕಳಿಯ ಮನವಿ, ಸ್ವಲ್ಪ ಸಂವೇದನಾಶೀಲರಾಗಿ ಪ್ರವರ್ತಿಸಿ, ಜೊತೆಗೆ ನಮ್ಮ ಪ್ರತಿಭೆ, ಕೌಶಲ್ಯದ ಕಡೆಗೂ ಗಮನಕೊಡಿ. ನಾವು ನಿಮ್ಮನ್ನು ರಂಜಿಸುವ ಮಾಧ್ಯಮದಲ್ಲಿದ್ದೇವೆ. ನಾನು ಕೂಡ ಮಹಿಳೆ ಅನ್ನೋದನ್ನು ಮರೆಯಬೇಡಿ ಎಂದು ಧನಶ್ರೀವರ್ಮಾ ಹೇಳಿದ್ದಾರೆ.