ಪ್ರಿಯಕರನ ಹೆಸರು ಬರೆದಿಟ್ಟು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!
ಬೆಂಗಳೂರು: ಪ್ರಿಯಕರನ (Lover) ಹೆಸರು ಬರೆದಿಟ್ಟು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ.
ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ (IT Company) ಕೆಲಸ ಮಾಡುತ್ತಿದ್ದ ಯುವತಿ ವಿದ್ಯಾಶ್ರೀ ಡೆತ್‌ನೋಟ್‌ನಲ್ಲಿ ಪ್ರಿಯಕರನ ಹೆಸರು, ಕಾರಣ ಬರೆದಿಟ್ಟು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆರೋಪಿ ಅಕ್ಷಯ್ ಹಾಗೂ ವಿದ್ಯಾಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರ ತನ್ನಿಂದ ದೂರ ಹೋಗುತ್ತಿದ್ದಾನೆ ಅಂತಾ ಅನುಮಾನಗೊಂಡ ವಿದ್ಯಾಶ್ರೀ ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆ. ಯುವತಿ ಮನೆಯಲ್ಲಿ ಬುಧವಾರ ಡೆತ್‌ನೋಟ್ ಪತ್ತೆಯಾದ ಬೆನ್ನಲ್ಲೇ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ಆರೋಪಿ ಅಕ್ಷಯ್‌ನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಸದ್ಯ ಸೋಲದೇವನಹಳ್ಳಿ ಠಾಣೆಯಲ್ಲಿ (Soladevanahalli Police Station) ಕೇಸ್ ದಾಖಲಾಗಿದೆ.
ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ:
ಮಾಡೆಲ್ ಸಹ ಆಗಿದ್ದ ವಿದ್ಯಾಶ್ರೀ ಮತ್ತು ಅಕ್ಷಯ್ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಕ್ಷಯ್ ವಿದ್ಯಾ ಬಳಿ 1.76 ಲಕ್ಷ ಹಣ ಪಡೆದುಕೊಂಡಿದ್ದ. ಕೊಟ್ಟ ಹಣ ಕೇಳಿದ್ದಕ್ಕೆ ವಿದ್ಯಾ ಮತ್ತು ಆಕೆಯ ಕುಟುಂಬದವರನ್ನ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ವಿದ್ಯಾಶ್ರೀ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೀಸ್ ಆಂಧ್ರ ಕಾಂಪಿಟೇಷನ್ ನಲ್ಲಿ ವಿಜೇತಳಾಗಿದ್ದ ಮೃತ ವಿದ್ಯಾಶ್ರೀ ಬಸವೇಶ್ವರ ನಗರದಲ್ಲಿ ಜೀಮ್ ಟ್ರೈನರ್ ಆಗಿದ್ದ ಆರೋಪಿ ಅಕ್ಷಯ್‌ಗೆ ಹಣ ಕೊಟ್ಟಿದ್ದರ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.
ಡೆತ್‌ನೋಟ್‌ನಲ್ಲಿ ಏನಿದೆ?
`ನನ್ನ ಸಾವಿಗೆ ಅಕ್ಷಯ್ ಕಾರಣ, ಅವನು ನನ್ನ ನಾಯಿ ಥರ ಟ್ರೀಟ್ ಮಾಡ್ತಿದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದರೆ, ನನಗೆ ಹಾಗೂ ನನ್ನ ಕುಟುಂಬಗ್ಗೆ ಕೆಟ್ಟ ಕೆಟ್ಟ ಮಾತಿನಲ್ಲಿ ಬೈದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಖಿನ್ನತೆಗೆ ಬದುಕಲು ಆಗುತ್ತಿಲ್ಲ. ದಿನೇ ದಿನೇ ನನಗೆ ತುಂಬಾ ಸ್ಟ್ರೆಸ್ ಆಗ್ತಿದೆ. ಅಮ್ಮ, ಗುರು ಮಾವ ನನ್ನನ್ನು ಕ್ಷಮಿಸಿ, ನನ್ನನ್ನು ಮರೆತುಬಿಡಿ.. ಎಲ್ಲಾ ಹುಡುಗಿಯರಿಗೆ ವಿನಂತಿ ಮಾಡುತ್ತೇನೆ ಯಾರೂ ಪ್ರೀತಿ ಮಾಡಬೇಡಿ… ಗುಡ್ ಬೈ ಟು ದಿಸ್ ವರ್ಲ್ಡ್’ ಅಂತಾ ಮೃತ ವಿದ್ಯಾಶ್ರೀ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.
ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಪತ್ತೆ ಮಾಡಲು ಡ್ರೋನ್ ಮೊರೆಹೋದ ಪೊಲೀಸರು
ಬೀದರ್: ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ 3 ದಿನಗಳಾದರೂ ಇನ್ನೂ ಪತ್ತೆಯಾಗದ ಕಾರಣ ಬೀದರ್ ಪೊಲೀಸರು (Bidar Police) ಡ್ರೋನ್ (Drone) ಮೊರೆ ಹೋಗಿದ್ದಾರೆ.
3 ದಿನಗಳ ಹಿಂದೆ ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ಸೇತುವೆ ದಾಟುವಾಗ 25 ವರ್ಷದ ಮಲ್ಲಪ್ಪ ಶರಣಪ್ಪ ಕರೆನವರ್ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ ಗ್ರಾಮದಲ್ಲಿ ಘಟನೆ ವರದಿಯಾಗಿದೆ.
ಇದೀಗ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ಸೂಚನೆಯಂತೆ ಯುವಕನ ಮೃತದೇಹವನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ 3 ದಿನಗಳಿಂದ ಶೋಧ ಕಾರ್ಯ ಮಾಡಿದರೂ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಗುರುವಾರ ಬೀದರ್ ಪೊಲೀಸ್ ಇಲಾಖೆ ಡ್ರೋನ್ ಮೊರೆ ಹೋಗಿದೆ.