ಕಾಂಗ್ರೆಸ್ ನಲ್ಲಿ ಈ ಬಾರಿ ಯುವ ಅಭ್ಯರ್ಥಿಗಳಿಗೆ ಆದ್ಯತೆ; ಇಲ್ಲಿದೆ ಹೊಸಬರ ಮುಖ ಪರಿಚಯ!
Karnataka Lok Sabha election : ಕರ್ನಾಟಕ ಲೋಕಸಭೆಗೆ ಈಗಾಗಲೇ ಕಾಂಗ್ರೆಸ್ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ ಈ ಪಟ್ಟಿಯಲ್ಲಿ ಹಲವು ಹೊಸ ಮುಖಗಳಿಗೆ ಹೈಕಮಾಂಡ್ ಅವಕಾಶ ಕೊಟ್ಟಿದೆ. ಇನ್ನು ಈ ಬಾರಿ ಬೀದರ್ ಲೋಕಸಭಾ ಕ್ಷೇತ್ರಕ್ಕೆ 26 ವರ್ಷದ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಕೆಲವು ಹೊಸ ಅಭ್ಯರ್ಥಿಗಳ ವಿವರ ಹೀಗಿದೆ
1.ಸಂಯುಕ್ತಾ ಪಾಟೀಲ
ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ, ರಾಜ್ಯದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ. ವಿಜಯಪುರದ ನಿವಾಸಿ. ಕಾನೂನು ಪದವೀಧರರಾದ ಅವರು ಶಾಲಾ ಮತ್ತು ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಪೂರೈಸಿದ್ದಾರೆ.
ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಶ್ರಮಿಸುವ ಸ್ಪರ್ಶ ಫೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಅವರು 2018ರಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದರು. 2019ರಿಂದ ಕೋಳಿ ಸಾಕಾಣಿಕೆ ಮತ್ತು ಮಾರುಕಟ್ಟೆ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. 2020ರಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
2. ಡಾ.ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ: ದಂತ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪೂರೈಸಿರುವ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪತ್ನಿ. ದಂತ ವೈದ್ಯೆಯಾಗಿರುವ ಅವರು, ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ. ಬಾಪೂಜಿ ವಿದ್ಯಾಸಂಸ್ಥೆಯ ಅಡಳಿತ ಮಂಡಳಿ ಸದಸ್ಯೆಯೂ ಹೌದು. ಎಸ್.ಎಸ್. ಕೇರ್ ಟ್ರಸ್ಟ್ ಮೂಲಕ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ರಕ್ತದಾನದ ಜಾಗೃತಿ ಮಾಡಿದ್ದಾರೆ. ‘ಮುಗುಳುನಗೆ’ ಯೋಜನೆಯಡಿ ಶಾಲಾ ಮಕ್ಕಳಿಗೆ ದಂತ ಪರೀಕ್ಷೆ ನಡೆಸಿದ್ದಾರೆ. ಹಲವು ಮಹಿಳೆಯರಿಗೆ ಉಚಿತ ಹೆರಿಗೆ ಹಾಗೂ ಮಗುವಿನ ಆರೈಕೆ, ಉಚಿತವಾಗಿ ಕಣ್ಣಿನ ಪೊರೆ ಚಿಕಿತ್ಸೆ, ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ, ಸ್ತನ ಕ್ಯಾನ್ಸರ್ ಪರೀಕ್ಷೆ, ಗರ್ಭ ಕ್ಯಾನ್ಸರ್ ಪರೀಕ್ಷೆ ನಡೆಸಿದ್ದಾರೆ.
3. ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಎಂಬಿಎ ಪದವೀಧರೆ ಆದ ಪ್ರಿಯಾಂಕಾ ಅವರು ಸಚಿವ ಸತೀಶ ಜಾರಕಿಹೊಳಿ ಪುತ್ರಿ. 27 ವರ್ಷ ವಯಸ್ಸಿನ ಅವರು ಅವರು ಕಳೆದ ಒಂದು ವರ್ಷದಿಂದ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ದೊಡ್ಡಪ್ಪ ರಮೇಶ ಜಾರಕಿಹೊಳಿ, ಚಿಕ್ಕಪ್ಪ ಬಾಲಚಂದ್ರ ಜಾರಕಿಹೊಳಿ ಶಾಸಕರು. ಇನ್ನೊಬ್ಬ ಚಿಕ್ಕಪ್ಪ ಲಖನ್ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯರು. ಸತೀಶ್ ಶುಗರ್ಸ್, ಬೆಳಗಾಮ್ ಶುಗರ್ಸ್, ಗಡಿಗಾಂವ್ ರೆಸಾರ್ಟ್ಸ್, ವೆಸ್ಟರ್ನ್ ಘಾಟ್ಸ್ ಇನ್ಸಾ ಲಿಮಿಟೆಡ್, ನೇಚರ್ ನೆಸ್ಟ್ ಹಾರ್ಟಿಕಲ್ಟರ್ ಅಂಡ್ ಅಗ್ರಿಕಲ್ಟರ್ ಫಾರ್ಮ್ಸ್, ಎಕ್ಸಲನ್ಸ್ ಗ್ರಾನೈಟ್ಸ್ ಅಂಡ್ ಮಿನರಲ್ಸ್ ಸೇರಿ 10 ದೊಡ್ಡ ಉದ್ಯಮ ಸಂಸ್ಥೆಗಳ ನಿರ್ದೇಶಕಿ ಆಗಿದ್ದಾರೆ ಹಾಗೂ ನಾಲ್ಕು ದೊಡ್ಡ ಉದ್ಯಮ ಸಂಸ್ಥೆಗಳ ಪಾಲುದಾರಿಕೆ ಹೊಂದಿದ್ದಾರೆ.
4. ವಿನೋದ ಅಸೂಟಿ
ಧಾರವಾಡ: ರಾಜಕೀಯ ನಂಟು ಇಲ್ಲದ ಕುಟುಂಬದಿಂದ ಬಂದವರು ವಿನೋದ ಅಸೂಟಿ. ವಯಸ್ಸು 34 ವರ್ಷ. ಕುರುಬ ಸಮುದಾಯದವರು. ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನೆಲೆಸಿದ್ದಾರೆ. ಬಿಬಿಎ ಪದವೀಧರರಾದ ಅವರು ಧಾರವಾಡದಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿ ಯೂತ್ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದರು. ಧಾರವಾಡ ಜಿಲ್ಲಾ (ಗ್ರಾಮೀಣ) ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಮೊದಲ ಸಲ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು, ಪರಾಭವಗೊಂಡಿದ್ದರು.
5. ಮೃಣಾಲ್ ಆರ್. ಹೆಬ್ಬಾಳಕರ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಆರ್. ಹೆಬ್ಬಾಳಕರ ದಶಕದಿಂದ ಕಾಂಗ್ರೆಸ್ ಯುವ ಘಟಕದಲ್ಲಿ ಗುರುತಿಸಿಕೊಂಡಿದ್ದಾರೆ. ಎರಡು ಅವಧಿಗೆ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದವರು. ಸಿವಿಲ್ ಎಂಜಿನಿಯರ್ ಆದ ಅವರಿಗೆ ಈಗ 31 ವರ್ಷ ವಯಸ್ಸು. ಅವರ ತಾಯಿ ಲಕ್ಷ್ಮಿ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಸೋದರಮಾವ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯ. ಮೃಣಾಲ್ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ, ಹರ್ಷಾ ಶುಗರ್ಸ್‌ನ ನಿರ್ದೇಶಕ, ಲಕ್ಷ್ಮಿತಾಯಿ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ, ಹರ್ಷಾ ಬಿಲ್ಡರ್ ಹಾಗೂ ಡೆವೆಲಪರ್ಸ್‌ನ ಉದ್ಯಮ ಸಹಭಾಗಿ ಆಗಿದ್ದಾರೆ.
6. ಸಾಗರ್ ಖಂಡ್ರೆ
ಬೀದರ್: ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆಯವರ ಮಗ ಸಾಗರ್ ಅವರಿಗೆ ಈಗಷ್ಟೇ 26ರ ಹರೆಯ, ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಬಿಎ, ಎಲ್‌ಎಲ್‌ಬಿ ಪದವಿ ಪೂರೈಸಿದ್ದಾರೆ. ಪ್ರತಿಷ್ಠಿತ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆಗಿದ್ದಾರೆ. ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕಾಂಗ್ರೆಸ್ ಪಕ್ಷದಿಂದ ಬೀದರ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅದೃಷ್ಟ ಅವರಿಗೆ ಒಲಿದು ಬಂದಿದೆ. ಅಪ್ಪನ ರಾಜಕೀಯ ಪಟ್ಟುಗಳನ್ನು ನೋಡುತ್ತಾ ಬೆಳೆದಿರುವ ಸಾಗರ್‌ಗೆ ಇದು ಮೊದಲ ಚುನಾವಣೆ.