ಯಶಸ್ವಿ ಜೈಸ್ವಾಲ್- ಶುಭ್ ಮನ್ ಗಿಲ್ ಆರ್ಭಟ, ರೋಹಿತ್- ರಾಹುಲ್ ದಾಖಲೆ ಉಡೀಸ್; ಭಾರತಕ್ಕೆ ಜಯ
ಫ್ಲೋರಿಡಾ: ಲಾಡರ್ಹಿಲ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ 4ನೇ ಟಿ-20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶುಭ್ ಮನ್ ಗಿಲ್ ಗಿಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಭರ್ಜರಿ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಸಾಯ್ ಹೋಪ್ 45,ಶಿಮ್ರಾನ್ ಹೆಟ್ಮಿಯರ್ 61 ರನ್ ಗಳಿಸಿದ್ದು ಹೊರತುಪಡಿಸಿದರೆ ಬೇರೆ ಯಾವ ಆಟಗಾರರು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.
ವೆಸ್ಟ್ ಇಂಡೀಸ್ ನೀಡಿದ 178 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ತನ್ನ ಆರಂಭಿಕ ಜೋಡಿಯಾದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ (Yashasvi Jaiswal – Shubman Gill ) ಅವರ 165 ರನ್‌ಗಳ ಜೊತೆಯಾಟದಿಂದಾಗಿ ಕೇವಲ 1 ವಿಕೆಟ್ ಕಳೆದುಕೊಂಡು ಇನ್ನು 18 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಇದು ಫ್ಲೋರಿಡಾದಲ್ಲಿ ಭಾರತಕ್ಕೆ ಸತತ ಐದನೇ ಗೆಲುವಾಗಿದ್ದು, ಇದರೊಂದಿಗೆ ಆಗಸ್ಟ್ 13 ರಂದು ಇದೇ ಮೈದಾನದಲ್ಲಿ ನಡೆಯಲ್ಲಿರುವ ಸರಣಿಯ ನಿರ್ಧಾರ ಹಾಗೂ ಕೊನೆಯ ಟಿ20 ಪಂದ್ಯದಲ್ಲೂ ಈ ಗೆಲುವಿನ ಸರಣಿಯನ್ನು ಮುಂದುವರೆಸಲು ಹಾರ್ದಿಕ್ ಪಡೆ ತಯಾರಿ ನಡೆಸುತ್ತಿದೆ.
ರೋಹಿತ್- ರಾಹುಲ್ ದಾಖಲೆ ಉಡೀಸ್
ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ 165 ರನ್‌ಗಳ ಬೃಹತ್ ಆರಂಭಿಕ ಜೊತೆಯಾಟದೊಂದಿಗೆ 2017 ರಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸೃಷ್ಟಿಸಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಾಸ್ತವವಾಗಿ ಈ ಪಂದ್ಯದಲ್ಲಿ 165 ರನ್‌ಗಳ ದಾಖಲೆಯ ಜೊತೆಯಾಟವನ್ನಾಡಿದ ಗಿಲ್- ಜೈಸ್ವಾಲ್ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಆರಂಭಿಕ ಜೊತೆಯಾಟವನ್ನಾಡಿದ ವಿಚಾರದಲ್ಲಿ ಭಾರತದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಆರು ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈ ಹಿಂದೆ ಅಂದರೆ 2017 ರಲ್ಲಿ ರೋಹಿತ್ ಮತ್ತು ರಾಹುಲ್ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ 165 ರನ್‌ಗಳ ಆರಂಭಿಕ ಜೊತೆಯಾಟವನ್ನಾಡಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಗಿಲ್- ಜೈಸ್ವಾಲ್ ಜೋಡಿ ಸರಿಗಟ್ಟುದೆ.
ಇನ್ನು 2018 ರಲ್ಲಿ ಇದೇ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಐರ್ಲೆಂಡ್ ವಿರುದ್ಧ 160 ರನ್ ಜೊತೆಯಾಟವನ್ನಾಡಿದ್ದು, ಎರಡನೇ ಅತ್ಯಧಿಕ ಆರಂಭಿಕ ಜೊತೆಯಾಟ ಎಂಬ ದಾಖಲೆಯಾಗಿದೆ.
ಇದಲ್ಲದೆ ಜೈಸ್ವಾಲ್ ಮತ್ತು ಗಿಲ್ ಅವರ ಜೊತೆಯಾಟವು ಯಾವುದೇ ವಿಕೆಟ್‌ಗೆ ಭಾರತೀಯ ಜೋಡಿಯ ಜಂಟಿ-ಎರಡನೇ ಜೊತೆಯಾಟವಾಗಿದೆ. 2022 ರಲ್ಲಿ ಐರ್ಲೆಂಡ್ ವಿರುದ್ಧ ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಮತ್ತು ದೀಪಕ್ ಹೂಡಾ ಅವರ 176 ರನ್ ಜೊತೆಯಾಟವು ಟಿ20 ಮಾದರಿಯಲ್ಲಿ ಭಾರತದ ಪರ ಅತ್ಯಧಿಕ ಜೊತೆಯಾಟದ ದಾಖಲೆಯಾಗಿದೆ.