Yashasvi Jaiswal: ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಶತಕ ಸಿಡಿಸಿ ದಿಗ್ಗಜರ ಪಟ್ಟಿಗೆ ಸೇರಲು ಸಜ್ಜಾದ ಜೈಸ್ವಾಲ್...!
Yashasvi Jaiswal: ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (India vs England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡ ಬಳಿಕ ಶ್ರೇಯಸ್ ಅಯ್ಯರ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 151 ಎಸೆತಗಳಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಶತಕ ಮೂಡಿಬಂತು. ಇದು ಅವರ ಎರಡನೇ ಅಂತರರಾಷ್ಟ್ರೀಯ ಟೆಸ್ಟ್ ಶತಕವಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿರುವ ಟೀಂ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, ಈ ಶತಕದೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರ ವಿಶೇಷ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ಯಶಸ್ವಿ ಜೈಸ್ವಾಲ್ಗೆ ತವರಿನಲ್ಲಿ ಇದು ಚೊಚ್ಚಲ ಟೆಸ್ಟ್ ಶತಕ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲ ಶತಕ ಸಿಡಿಸಿದ ಜೈಸ್ವಾಲ್, ಇದೀಗ ತವರು ನೆಲ ಹಾಗೂ ವಿದೇಶಿ ನೆಲದಲ್ಲಿ ಶತಕ ಪೂರೈಸಿದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಅದರಲ್ಲೂ ಕೇವಲ 22 ವರ್ಷಗಳಲ್ಲಿ ಈ ಸಾಧನೆ ಮಾಡಿರುವ ಜೈಸ್ವಾಲ್, 23 ವರ್ಷ ತುಂಬುವ ಮುಂಚೆಯೇ, ಜೈಸ್ವಾಲ್ ತವರು ಮತ್ತು ವಿದೇಶದಲ್ಲಿ ಟೆಸ್ಟ್ ಶತಕ ಸಿಡಿಸಿದ್ದು, ಇದರೊಂದಿಗೆ ಭಾರತ ದಿಗ್ಗಜ ಬ್ಯಾಟರ್ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ವಾಸ್ತವವಾಗಿ ಜೈಸ್ವಾಲ್ ಇತ್ತೀಚೆಗೆ ಡಿಸೆಂಬರ್ 28 ರಂದು ತಮ್ಮ 22ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂದಿದ್ದರು. ಅಂದರೆ ಅವರಿಗೆ 23 ವರ್ಷ ತುಂಬಲು ಇನ್ನೂ ಸಾಕಷ್ಟು ಸಮಯವಿದೆ. ಇದೀಗ 23 ನೇ ವರ್ಷಕ್ಕೆ ಕಾಲಿಡುವ ಮೊದಲು ದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಶತಕ ಸಿಡಿಸಿದ 4 ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಜೈಸ್ವಾಲ ಪಾತ್ರರಾಗಿದ್ದಾರೆ.
ಈ ಹಿಂದೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರು 23 ವರ್ಷಕ್ಕೆ ಕಾಲಿಡುವ ಮೊದಲೇ ಸ್ವದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್ ಶತಕಗಳನ್ನು ಸಿಡಿಸಿದ್ದರು. ಅವರ ನಂತರ ಸಚಿನ್ ತೆಂಡೂಲ್ಕರ್ ನಂತರ ಮತ್ತು ವಿನೋದ್ ಕಾಂಬ್ಳಿ ಈ ಸಾಧನೆ ಮಾಡಿದ್ದರು
ಜೈಸ್ವಾಲ್ಗೂ ಮೊದಲು 1993 ರಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದ ವಿನೋದ್ ಕಾಂಬ್ಳಿ, ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 1995 ರಲ್ಲಿ ಆಡಿದ್ದರು. ಅಂದಿನಿಂದ, ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ 2024 ರಲ್ಲಿ, ಯಶಸ್ವಿ ಜೈಸ್ವಾಲ್ ಈ ವಿಶೇಷ ಪಟ್ಟಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ
ಈ ಸರಣಿಯ ಮೊದಲ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿ ಕೇವಲ 74 ಎಸೆತಗಳಲ್ಲಿ 80 ರನ್ ಗಳಿಸಿದರು. ಆ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ 10 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದ್ದರು.
ಜೈಸ್ವಾಲ್ ಅವರ ವಿಶೇಷವೆಂದರೆ ಅವರು ಶತಕ ಬಾರಿಸಿದಾಗಲೆಲ್ಲ ಅದನ್ನು ಇನ್ನೂ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುತ್ತಾರೆ. ಇದಕ್ಕೂ ಮೊದಲು, ಅಂದರೆ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನಾಡಿದ್ದ ಜೈಸ್ವಾಲ್ ಶತಕ ಸಿಡಿಸಿದಲ್ಲದೆ, 171 ರನ್ಗಳ ಬಿಗ್ ಇನ್ನಿಂಗ್ಸ್ ಆಡಿದ್ದರು.