ಯಕ್ಷಗಾನ ಯುವ ಕಲಾವಿದ ರಾಜೇಂದ್ರ ಗಾಣಿಗ ಅನಾರೋಗ್ಯದಿಂದ ವಿಧಿವಶ
ಉಡುಪಿ: ಯಕ್ಷಗಾನ ಯುವ ವೇಷಧಾರಿ ಹೆರಂಜಾಲು ರಾಜೇಂದ್ರ ಗಾಣಿಗ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ (ಸೆ.21) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 41ವರ್ಷ ವಯಸ್ಸಾಗಿತ್ತು.
ಎರಡೂವರೆ ದಶಕಗಳ ಕಾಲ ವಿವಿಧ ಮೇಳಗಳಲ್ಲಿ ವೇಷಧಾರಿಯಾಗಿದ್ದ ರಾಜೇಂದ್ರ ಗಾಣಿಗ ಅವರು ಮಾರಣಕಟ್ಟೆ, ಹಾಲಾಡಿ, ಸೌಕೂರು, ನೀಲಾವರ ಮೇಳಗಳಲ್ಲಿ ಹಾಗೂ ಸುಮಾರು ಹತ್ತು ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಪುರುಷ ವೇಷಧಾರಿಯಾಗಿ ಕಲಾ ಸೇವೆ ಮಾಡಿದ್ದರು.
ಅವಿವಾಹಿತರಾಗಿದ್ದ ರಾಜೇಂದ್ರ ಗಾಣಿಗ ತಾಯಿ ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ ಸೇರಿ ಕಲಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಬಂಟ್ವಾಳ: ಮನೆ ಕಿಟಕಿ ತೆರೆದು ಲೈಂಗಿಕ ಕಿರುಕುಳ ನೀಡಲು ಯತ್ನ- ದೂರು ದಾಖಲು
ಬಂಟ್ವಾಳ: ಮನೆಯಲ್ಲಿ ಮಲಗಿರುವ ಯುವತಿಗೆ ಕೋಣೆಯ ಕಿಟಕಿ ತೆರೆದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಬಾಳ್ತಿಲ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ಈ ಘಟನೆ ಸೆ.20 ರಂದು ರಾತ್ರಿ 10 ಗಂಟೆಯ ಬಳಿಕ ನಡೆದಿದೆ ಎನ್ನಲಾಗಿದೆ.
ಆರೋಪಿ ಮನೆಯ ಕೋಣೆಯ ಕಿಟಕಿಯ ಪರದೆಯನ್ನು ಸರಿಸಿ ಬಳಿಕ ಕಿಟಕಿ ಮೂಲಕ ಯುವತಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಇಣುಕಿ ನೋಡುತ್ತಿದ್ದ.
ಈತ ಕಿಟಕಿಯ ಬಳಿ ನಿಂತು ಇಣುಕಿ ನೋಡುತ್ತಿದ್ದನ್ನು ಗಮನಿಸಿ ದೂರುದಾರರು ಜೋರಾಗಿ ಕಿರುಚಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ.
ಈತ ನೆರೆಮನೆಯವನಾಗಿದ್ದು, ಈತನ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದಾರೆ.
ದೂರುದಾರರ ತಂದೆ ನಿಧನ ಹೊಂದಿದ್ದು, ತಾಯಿ ಹಾಗೂ ಮೂವರು ಹೆಣ್ಣುಮಕ್ಕಳು ಮನೆಯಲ್ಲಿ ಇದ್ದಾರೆ.
ಮನೆಯಲ್ಲಿ ಮಹಿಳೆಯರೇ ಇರುವ ಕಾರಣ ಈತ ರಾತ್ರಿ ವೇಳೆ ಲೈಂಗಿಕ ಕಿರುಕುಳ ನೀಡಲು ಬಂದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.
ಈತನ ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೋಲೀಸರಿಗೆ ಮನವಿ ಮಾಡಿದ್ದಾರೆ.