Women's Asia Cup: ಪಾಕಿಸ್ತಾನ ತಂಡವನ್ನು ಮಣಿಸಿದ ಶ್ರೀಲಂಕಾ; ಭಾರತ- ಶ್ರೀಲಂಕಾ ನಡುವೆ ಏಷ್ಯಾಕಪ್ ಫೈನಲ್
Women’s Asia Cup: ನಾಯಕಿ ಚಾಮರಿ ಅಥಾಪತ್ತು ಅವರ ಪರಿಶ್ರಮದ ಅರ್ಧಶತಕದ ನೆರವಿನಿಂದ ಶುಕ್ರವಾರದಂದು ಡಂಬುಲಾದಲ್ಲಿ ನಡೆದ ಮಹಿಳೆಯರ ಏಷ್ಯಾಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಪಾಕಿಸ್ತಾನ ವಿರುದ್ಧ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೊನೆಯ ಓವರ್ನ 5ನೇ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು.
ಲಂಕಾ ಪರ ನಾಯಕಿಯ ಇನ್ನಿಂಗ್ಸ್ ಆಡಿದ ಚಾಮರಿ ಅಥಾಪತ್ತು 63 ರನ್ ಬಾರಿಸಿ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು. ಸೆಮಿಫೈನಲ್ ಗೆದ್ದಿರುವ ಶ್ರೀಲಂಕಾ ತಂಡ ಇದೀಗ ಭಾನುವಾರ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕರಾದ ಗುಲ್ ಫಿರೋಜಾ ಮತ್ತು ಮುನೀಬ ಅಲಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ಆದರೆ ಈ ಜೊತೆಯಾಟ ಮುರಿಯುವುದರ ಜೊತೆಗೆ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಇತ್ತ ಶ್ರೀಲಂಕಾ ಕೂಡ ಹೆಚ್ಚು ರನ್ ಬಿಟ್ಟುಕೊಡದೆ ಪಾಕಿಸ್ತಾನ ತಂಡವನ್ನು ಬೃಹತ್ ಮೊತ್ತ ದಾಖಲಿಸದಂತೆ ತಡೆಯಿತು. ಪಾಕ್ ಪರ ಗುಲ್ ಫಿರೋಜಾ 25 ರನ್ ಬಾರಿಸಿದರೆ, ಮುನೀಬ ಅಲಿ 37 ರನ್ಗಳ ಇನ್ನಿಂಗ್ಸ್ ಆಡಿದರು. ಸಿದ್ರಾ ಅಮೀನ್ 10 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ನಾಯಕಿ ನಿದಾ ದರ್ 23 ರನ್ ಬಾರಿಸಿದರು. ಕೊನೆಯಲ್ಲಿ ಅಲಿಯಾ ರಿಯಾಜ್ ಅಜೇಯ 16 ರನ್, ಫಾತಿಮಾ ಸನಾ 23 ರನ್ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕೆ ಕೊಂಡೊಯ್ದರು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ನ ಮೂರನೇ ಎಸೆತದಲ್ಲೇ ವಿಶ್ಮಿ ಗುಣರತ್ನೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹರ್ಷಿತಾ ಸಮರವಿಕ್ರಮ ಅವರ ಇನ್ನಿಂಗ್ಸ್ ಕೂಡ 12 ರನ್ಗಳಿಗೆ ಅಂತ್ಯಗೊಂಡಿತು.
ಕವಿಶಾ ದಿಲ್ಹಾರಿ ಕೂಡ 17 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇನ್ನೊಂದು ತುದಿಯಲ್ಲಿ ದಿಟ್ಟ ಹೋರಾಟ ನೀಡಿದ ಲಂಕಾ ನಾಯಕಿ ಚಾಮರಿ ಅಥಾಪತ್ತು 63 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಚಾಮರಿ ಅಥಾಪತ್ತು ಔಟಾದ ಬಳಿಕ ಪಾಕಿಸ್ತಾನ ಮತ್ತೆ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಂಡಿತು. ಆದರೆ 19ನೇ ಓವರ್ನಲ್ಲಿ ನೀಡಿದ 13 ರನ್ಗಳು ತುಂಬಾ ದುಬಾರಿಯಾದವು. ಇದು ಮಾತ್ರವಲ್ಲದೆ ಇಡೀ ಪಂದ್ಯದಲ್ಲಿ ಪಾಕ್ ತಂಡ ಮಾಡಿದ ಕಳಪೆ ಫೀಲ್ಡಿಂಗ್, ನೋ ಬಾಲ್ಗಳು ಸೋಲಿಗೆ ಪ್ರಮುಖ ಕಾರಣವಾದವು.
ಸ್ಮೃತಿ, ರೇಣುಕಾ ಶೈನ್ – ಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ
ಡಂಬುಲ್ಲಾ: ಮಹಿಳಾ ಏಷ್ಯಾಕಪ್ (Women’s Asia Cup) ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ (India Womens Team) ಸತತ 5ನೇ ಬಾರಿಗೆ ಫೈನಲ್ ತಲುಪಿತು.
012, 2016, 2018, 2022ರಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ 2018 ಹೊರತುಪಡಿಸಿ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2018ರಲ್ಲಿ ಬಾಂಗ್ಲಾ (Bangladesh Womens) ವಿರುದ್ಧವೇ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ 5ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮುವ ಭರವಸೆ ಮೂಡಿಸಿದೆ.
ಶುಕ್ರವಾರ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ಗೆ 80 ರನ್ ಬಾರಿಸಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ 11 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 83 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ಆರಂಭಿಸಿದ ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (Shafali Verma) 26 ರನ್ (28 ಎಸೆತ, 2 ಬೌಂಡರಿ), ಸ್ಮೃತಿ ಮಂಧಾನ (Smriti Mandhana) 55 ರನ್ (39 ಎಸೆತ, 9 ಬೌಂಡರಿ, 1 ಸಿಕ್ಸರ್) ಬಾರಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾ ದೇಶದ ವಿರುದ್ಧ ಭಾರತದ ಬೌಲರ್‌ಗಳು ಘಾತುಕ ದಾಳಿ ನಡೆಸಿದರು. ಮಧ್ಯಮವೇಗಿ ರೇಣುಕಾ ಸಿಂಗ್ 4 ಓವರ್‌ಗಳಲ್ಲಿ 1 ಮೇಡಿನ್ ಸಹಿತ ಕೇವಲ 10 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 50 ವಿಕೆಟ್‌ಗಳ ಮೈಲುಗಲ್ಲು ತಲುಪಿದರು. ಇದರೊಂದಿಗೆ ರಾಧಾ ಯಾದವ್ 4 ಓವರ್‌ಗಳಲ್ಲಿ 3 ವಿಕೆಟ್ ಕಿತ್ತರೆ, ಪೂಜಾ ವಸ್ತ್ರಕಾರ್ ಹಾಗೂ ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಕಿತ್ತರು.
ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನಾ 51 ಎಸೆತ ಎದುರಿಸಿ 32 ರನ್, ಶೋರ್ನಾ ಅಖ್ತರ್ 19 ರನ್ ಗಳಿಸಿದ್ರೆ, ಉಳಿದ ಆಟಗಾರರು ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದರು.