ದೇವಸ್ಥಾನದ ಪ್ರಸಾದ ಸೇವಿಸಿ ಮಹಿಳೆ ಸಾವು..!
ದೇವನಹಳ್ಳಿ, ಡಿಸೆಂಬರ್ 25: ದೇವಸ್ಥಾನದ (Temple) ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಹೊಸಕೋಟೆಯ (Hoskote) ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ಹೊಸಕೋಟೆಯ ಕಾವೇರಿನಗರ ನಿವಾಸಿ ಸಿದ್ದಗಂಗಮ್ಮ (60) ಮೃತದುರ್ದೈವಿ. ಹನುಮ ಜಯಂತಿ ಹಿನ್ನೆಲೆಯಲ್ಲಿ ಹೊಸಕೋಟೆಯ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ, ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತರು ಪುಲಿಯೋಗರೆ, ಪಾಯಸ, ಲಡ್ಡು ಸೇವಿಸಿದ್ದರು.
ದೇವಾಲಯಗಳಲ್ಲಿ ಪ್ರಸಾದ ತಿಂದಿದ್ದ 100ಕ್ಕೂ ಹೆಚ್ಚು ಭಕ್ತರು ರಾತ್ರಿಯಿಂದ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರನ್ನು ಹೊಸಕೋಟೆ, ಕೋಲಾರ, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಗೆ ದಾಖಲಾದವರಲ್ಲಿ 22ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸಿದ್ದಗಂಗಮ್ಮ ಅವರಿಗೆ ಪತಿ ಶಿವಣ್ಣ ಲಾಡು ಪ್ರಸಾದ ತಂದುಕೊಂಟಿದ್ದಾರೆ. ಈ ಪ್ರಸಾದವನ್ನು ತಿಂದ ಸಿದ್ದಗಂಗಮ್ಮ ಅವರು ಬೆಳಿಗ್ಗೆ ವಾಂತಿ ಭೇದಿಯಿಂದ ಬಳಲುತ್ತಿದ್ದರು. ಕೂಡಲೆ ಅವರನ್ನು ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಮ್ಮ ಮೃತಪಟ್ಟಿದ್ದಾರೆ.
ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ 30 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀನಿವಾಸ ನರ್ಸಿಂಗ್ ಹೋಮ್ನಲ್ಲಿ 21 ಜನರಿಗೆ, ಹೊಸಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ 7 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 70ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಸಿಲಿಕಾನ್ ಸಿಟಿ ಆಸ್ಪತ್ರೆಗೆ ಹೆಚ್ಚುವರಿ ಎಸ್ಪಿ ಪುರುಷೋತ್ತಮ್ ಭೇಟಿ ನೀಡಿದ್ದಾರೆ.
ಮರಗಳ ಮಾರಣಹೋಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ; ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಸ್ಪಷ್ಟನೆ
ಹಾಸನ, ಡಿ.25: ಮರಗಳ ಮಾರಣಹೋಮ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ(Pratap Simha)ತಮ್ಮನ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಪಟ್ಟಂತೆ ‘ಮರಗಳ ಮಾರಣಹೋಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ(Vikram Simha) ಸ್ಪಷ್ಟನೆ ನೀಡಿದ್ದಾರೆ. ನಾನು ಶುಂಠಿ ಬೆಳೆಯಲು ಜುಲೈ 24 ರಿಂದ ಆ ಭೂಮಿಯನ್ನು ಒಂದು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಆದರೆ, ಮರಗಳನ್ನು ಕಡಿದಿರುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವುದರಿಂದ ನನ್ನ ಅಣ್ಣನ ಟಾರ್ಗೆಟ್
ಹಾಸನದಲ್ಲಿ ಮಾತನಾಡಿದ ಅವರು ‘ಒಂದು ತಿಂಗಳಿನಿಂದ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಗಮನಿಸುತ್ತೀದ್ದೀರಾ, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ಮೂಲಕ ನನ್ನ ಅಣ್ಣನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲವೂ ರಾಜಕೀಯ ಪ್ರೇರಿತವಾದದ್ದು, ಮರ ಕಡಿದಿರುವುದರ ಹಿಂದೆ ನನ್ನ ಕೈವಾಡವಿಲ್ಲ. ಮರ ಕಡೆದಿರುವ ವಿಚಾರವೇ ನನಗೆ ಗೊತ್ತಿಲ್ಲ ಎಂದರು.
ಮರಗಳ ಕಡಿದಿರುವ ಬಗ್ಗೆ ತನಿಖೆ ಮಾಡಲಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಮರಗಳನ್ನು ಕಡಿದಿರುವ ಬಗ್ಗೆ ತನಿಖೆ ಮಾಡಲಿ. ಕಾಂಗ್ರೆಸ್ ಸೋಶಿಯಲ್ ಮಿಡಿಯಾ ವಿರುದ್ಧ ನಾನು ಲೀಗಲ್ ನೋಟೀಸ್ ನೀಡುತ್ತೇನೆ. ಪ್ರತಾಪ್ ಸಿಂಹ ಅವರನ್ನು ಈಗ ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಬೇಲೂರು ತಹಸೀಲ್ದಾರ್ ಜೊತೆಯೂ ಮಾತನಾಡುತ್ತೇನೆ. ನನ್ನ ವಿರುದ್ಧ ಅರಣ್ಯ ಸಚಿವರಿಗೆ ದೂರು ನೀಡಿರುವ ದೀಪಕ್ ಯಾರು ಎಂದು ನನಗೆ ಗೊತ್ತೇ ಇಲ್ಲ. ನನ್ನ ವಿರುದ್ಧ ಆರೋಪ ಸತ್ಯಕ್ಕೆ ದೂರವಾದದ್ದು, ಕಾಂಗ್ರೆಸ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಎಂದು ವಿಕ್ರಮ್ ಆರೋಪಿಸಿದ್ದಾರೆ.