ವರದಕ್ಷಿಣೆ ಕಿರುಕುಳದಿಂದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ;ಕೊಲೆ ಆರೋಪ
ಬೆಂಗಳೂರು, ಜನವರಿ 23: ಜ್ಞಾನಭಾರತಿ (Jnanabharathi) ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿನ ಮನೆಯೊಂದರಲ್ಲಿ ಓರ್ವ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಜಿತಾ (27) ಮೃತ ದುರ್ದೈವಿ. ಮಗಳನ್ನು ಕೊಲೆ ಮಾಡಲಾಗಿದೆ ಎಂದು ರಂಜಿತಾ ಪೋಷಕರ ಆರೋಪ ಮಾಡಿದ್ದಾರೆ. ಅಲ್ಲದೇ ಪತ್ನಿ ರಜಿತಾಗೆ ಪತಿ ಮಧು ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ (Dowry) ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ರಂಜಿತಾ ಅವರು ತುಮಕೂರು ಜಿಲ್ಲೆ ತುರುವೇಕೆರೆ ಮೂಲದ ಮಧು ಅವರನ್ನು ಐದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ರಂಜಿತಾ ವೃತ್ತಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರು. ಇನ್ನು ಪತಿ ಮಧು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಮದುವೆಯಾದಗಿನಿಂದಲೂ ಮಧು ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ವರದಕ್ಷಿಣೆ ನೀಡಿಲ್ಲವೆಂದು ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆಂದು ರಂಜಿತಾ ಪೋಷಕರು ಆರೋಪ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳದ ಬಗ್ಗೆ ರಂಜಿತಾ ಆಗಾಗ ತಾಯಿ ಬಳಿ ಹೇಳಿದ್ದರು. ಅಲ್ಲದೆ ರಂಜಿತಾ ಸಾವಿಗೂ ಮುನ್ನ ತಾಯಿಗೆ ವಿಡಿಯೋ ಕಾಲ್ ಮಾಡಿದ್ದರು. ಬಳಿಕ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಜ್ಞಾನಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಮಹಿಳೆ ಶವ ಪತ್ತೆ
ಮಂಡ್ಯ: ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮೇಲುಕೋಟೆಯಲ್ಲಿ ಘಟನೆ ನಡೆದಿದೆ. ದೀಪಿಕಾ (28) ಕೊಲೆಯಾದ ಮಹಿಳೆ. ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾದ ದೀಪಿಕಾ ಮೇಲುಕೋಟೆಯ ಎಸ್ಇಟಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಜನವರಿ 20 ರಂದು ಶಾಲೆಗೆ ಹೋದವರು ಸಂಜೆ ಮನೆಗೆ ವಾಪಸ್ ಆಗಿಲ್ಲ. ಇದರಿಂದ ಗಾಭರಿಗೊಂಡ ಕುಟುಂಬಸ್ಥರು ಅಂದು ಸಂಜೆ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿನ್ನೆ (ಜ.22) ಸಂಜೆ ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.