ಆರ್ಸಿಬಿ ತಂಡದ ಫಿನಿಷಿಂಗ್ ಬ್ಯಾಟರ್ ದಿನೇಶ್ ಕಾರ್ತಿಕ್ ಟಿ-20 ವಿಶ್ವ ಕಪ್ ಗೆ ಆಯ್ಕೆಯಾಗ್ತರಾ?
ತನ್ನ ಅಂತಿಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಆಟಗಾರನಾಗಿ ದಿನೇಶ್ ಕಾರ್ತಿಕ್ ತಮ್ಮ ಪ್ರಚಂಡ ಬ್ಯಾಟಿಂಗ್ ಪರಾಕ್ರಮ ತೋರಿಸುತ್ತಿದ್ದಾರೆ.2024ರ ಐಪಿಎಲ್ ಋತುವಿನ ಆರಂಭಕ್ಕೂ ಮುನ್ನ ಇದು ತಮ್ಮ ಅಂತಿಮ ಐಪಿಎಲ್ ವರ್ಷ ಎಂದು ಅನುಭವಿ ಕ್ರಿಕೆಟಿಗ ಘೋಷಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಈಗಾಗಲೇ ವಿಭಿನ್ನ ಹಾಗೂ ಅದ್ಭುತ ಶಾಟ್‌ಗಳಿಂದ ಅಭಿಮಾನಿಗಳ ಮನರಂಜಿಸಿದ್ದಾರೆ.
ಈ ಬಾರಿಯ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಲು ಹೆಣಗಾಡುತ್ತಿದ್ದರೂ, ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಮಾತ್ರ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಬಳಿಕ ಆರ್‌ಸಿಬಿ ಪರ ಹೆಚ್ಚು ರನ್ ಗಳಿಸಿದ್ದಾರೆ.
ದಿನೇಶ್ ಕಾರ್ತಿಕ್ ಅವರನ್ನು ಆರ್‌ಸಿಬಿ ತಂಡದಲ್ಲಿ ಅತ್ಯುತ್ತಮ ಫಿನಿಶರ್ ಆಗಿ ಬಳಸಲಾಗುತ್ತಿದೆ ಮತ್ತು ಈವರೆಗೆ ಕಾರ್ತಿಕ್ ತಮಗೆ ನೀಡಿದ ಪಾತ್ರವನ್ನು ಉತ್ತಮವಾಗಿ ಹಾಗೂ ವಿಭಿನ್ನವಾಗಿ ನಿಭಾಯಿಸಿದ್ದಾರೆ. ಆರ್‌ಸಿಬಿ ತಂಡದ ಕಳಪೆ ಅಭಿಯಾನದ ಮಧ್ಯೆ, ಭಾರತದ ಆಟಗಾರರಲ್ಲಿ ಮಿಂಚಿದ ಕೆಲವರಲ್ಲಿ ದಿನೇಶ್ ಕಾರ್ತಿಕ್ ಒಬ್ಬರಾಗಿದ್ದಾರೆ. 38 ವರ್ಷದ ದಿನೇಶ್ ಕಾರ್ತಿಕ್ 2024ರ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 143 ರನ್ ಗಳಿಸಿದ್ದಾರೆ. 71.5ರ ಸರಾಸರಿ ಮತ್ತು 190ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್, ಈ ಬಾರಿ ಅತ್ಯುತ್ತಮ ಫಾರ್ಮ್‌ಗೆ ಮರಳಿದ್ದಾರೆ. ಗುರುವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ ಅಜೇಯ 53 ರನ್ ಬಾರಿಸಿದ್ದು, ಕಾರ್ತಿಕ್ ಹೊಂದಿರುವ ಅಪಾರ ಸಾಮರ್ಥ್ಯ ಮತ್ತು ಅನುಭವಕ್ಕೆ ಸಾಕ್ಷಿಯಾಗಿದೆ. ಇದೇ ವೇಳೆ ದಿನೇಶ್ ಕಾರ್ತಿಕ್ ಅವರು ಮನಸ್ಸಿನಲ್ಲಿ ಟಿ20 ವಿಶ್ವಕಪ್ ಇದೆಯೇ ಅನುಮಾನ ಕಾಡುತ್ತಿದೆ. ಟಿ20 ವಿಶ್ವಕಪ್ ನಡೆಯುವ ವರ್ಷದ ಐಪಿಎಲ್‌ನಲ್ಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿ ಭಾರತ ತಂಡದ ಆಯ್ಕೆಗಾರರ ಗಮನ ಸೆಳೆದಿದ್ದಾರೆ.
ಈ ಹಿಂದೆ 2022ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅದ್ಭುತ ಬ್ಯಾಟಿಂಗ್‌ನಿಂದಾಗಿ ಅದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಕಾರ್ತಿಕ್ ತಮ್ಮ ಮನಸ್ಸಿನಲ್ಲಿ ಅದೇ ರೀತಿಯ ಉದ್ದೇಶಗಳನ್ನು ಹೊಂದಿದ್ದಾರೆ.
ಇದೀಗ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯು ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವುದರಿಂದ, ಭಾರತ ತಂಡದಲ್ಲಿ ಸ್ಥಾನ ಪಡೆಯಲು ಎಲ್ಲರಿಗಿಂತ ಮೊದಲು ದಿನೇಶ್ ಕಾರ್ತಿಕ್ ಟವೆಲ್ ಎಸೆದಿದ್ದಾರೆ. ಗಮನಾರ್ಹವಾಗಿ, ದಿನೇಶ್ ಕಾರ್ತಿಕ್ ವಿಕೆಟ್ ಹಿಂದೆಯೂ ಅದ್ಭುತವಾಗಿ ಕೆಲಸ ಮಾಡುತ್ತಾರೆ. ಪ್ರಸಕ್ತ ಐಪಿಎಲ್ ನಂತರ, ದಿನೇಶ್ ಕಾರ್ತಿಕ್ ತನ್ನ ವಿದಾಯವನ್ನು ಘೋಷಿಸಿದ್ದರೂ, ಭಾರತ ತಂಡದ ಆಯ್ಕೆಗಾಗಿ ಇನ್ನೂ ಸಕ್ರಿಯವಾಗಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಟಿ20 ವಿಶ್ವಕಪ್‌ನಲ್ಲಿ ಆಡಲು ದಿನೇಶ್ ಕಾರ್ತಿಕ್‌ಗೆ ತಮಾಷೆಯಾಗಿ ಕಾಲೆಳೆದಿರುವುದು ಕಂಡುಬಂದಿದೆ. 2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ದಿನೇಶ್ ಕಾರ್ತಿಕ್ ಆಯ್ಕೆಯಾಗುತ್ತಾರಾ?
ಕ್ರಿಕೆಟ್ ಒಂದು ಅನಿಶ್ಚಿತತೆಯ ಕ್ರೀಡೆಯಾಗಿದೆ. 38 ವರ್ಷದ ದಿನೇಶ್ ಕಾರ್ತಿಕ್ ಅವರು ತಮ್ಮ ವೃತ್ತಿಜೀವನದ ಅಂತ್ಯಕಾಲದಲ್ಲಿದ್ದರೂ, ಭಾರತ ತಂಡಕ್ಕೆ ಮತ್ತೊಮ್ಮೆ ಆಯ್ಕೆಯಾಗುವುದನ್ನು ಯಾರೂ ತಳ್ಳಿಹಾಕುವ ಸ್ಥಿತಿಯಲ್ಲಿಲ್ಲ. ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ತಮ್ಮ ಫಿನಿಶಿಂಗ್ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಆರ್‌ಸಿಬಿ ತಂಡದಲ್ಲಿ ಅವರ ಪ್ರಭಾವಿ ಪ್ರದರ್ಶನ ಕಂಡುಬರುತ್ತಿದೆ. ಆರ್‌ಸಿಬಿ ತಂಡ ತಮ್ಮ ಐಪಿಎಲ್ ಆವೃತ್ತಿಯನ್ನು ಉತ್ತಮಗೊಳಿಸಬೇಕಾದರೆ ದಿನೇಶ್ ಕಾರ್ತಿಕ್ ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ. ಆದರೆ ಭಾರತ ತಂಡಕ್ಕೆ ಈ ಸನ್ನಿವೇಶ ಭಿನ್ನವಾಗಿದೆ. ಈಗಾಗಲೇ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನಕ್ಕಾಗಿ ಹಲವು ಯುವ ಆಟಗಾರರು ರೇಸ್‌ನಲ್ಲಿದ್ದಾರೆ. ಹೀಗಾಗಿ ಹಿರಿಯನಾಗಿರುವ ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್ ಕೀಪರ್-ಬ್ಯಾಟರ್ ಆಗಿ ಸೇರಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.
ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರು ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪ್ರಸ್ತುತ ರೇಸ್‌ನಲ್ಲಿದ್ದಾರೆ. ಐಪಿಎಲ್ 2024ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇಶಾನ್ ಕಿಶನ್ ಕೂಡ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ರಿಷಭ್ ಪಂತ್ ಈಗಾಗಲೇ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಬಿಸಿಸಿಐ ಆಯ್ಕೆಗಾರರು ಸೂಚಿಸಿದಂತೆ, ಟಿ20 ಕ್ರಿಕೆಟ್ ಯುವ ಸಮೂಹದ ಒಂದು ಸ್ವರೂಪವೆಂದು ಪರಿಗಣಿಸಲಾಗಿದೆ. ಇದು ಜಿತೇಶ್ ಶರ್ಮಾ, ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ಅವರಂತಹವರಿಗೆ ಅವಕಾಶವನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದರೂ, ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರಿಗೆ ಭಾರತ ತಂಡಕ್ಕೆ ಪ್ರವೇಶಿಸುವುದು ಕಷ್ಟವಾದ ಕೆಲಸದಂತೆ ತೋರುತ್ತಿದ್ದರೂ, ಯಾವುದನ್ನು ಇಲ್ಲ ಅಥವಾ ಆಗಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ.