ಯಾರ ಖಾತೆಗೆ ಸಿಗಲಿದೆ ಅನ್ನಭಾಗ್ಯ ಹಣ? ಇಲ್ಲಿದೆ ವಿವರ, ಪ್ರಯೋಗಿಕವಾಗಿ ಈ ಎರಡು ಜಿಲ್ಲೆಯಲ್ಲಿ ಚಾಲನೆ!
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಸೋಮವಾರ ಚಾಲನೆ ಸಿಗಲಿದೆ. 1.28 ಕೋಟಿ ಪಡಿತರ ಕುಟುಂಬಗಳಿಗೆ ನೇರವಾಗಿ ನಗದು ವರ್ಗಾವಣೆ ಆಗಲಿದೆ. ಸೋಮವಾರ ಸಂಜೆ 5 ಗಂಟೆಗೆ ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಹಸಿವು ಮುಕ್ತ ಕರ್ನಾಟಕ ಎಂಬ ಘೋಷ ವಾಕ್ಯದೊಂದಿಗೆ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಈ ಯೋಜನೆಯ ಪ್ರಕಾರ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಅಥವಾ ಆಹಾರ ಧಾನ್ಯ ಉಚಿತವಾಗಿ ಸಿಗಲಿದೆ.
ಯೋಜನೆಗೆ ಅಕ್ಕಿ ಸಿಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ಫಲಾನುಭವಿಗಳಿಗೆ 170 ರೂಪಾಯಿ ಹಣ ನೀಡಲಾಗುತ್ತದೆ. ಇದರಿಂದ 44.80 ಲಕ್ಷ ಅಂತ್ಯೋದಯ ಹಾಗೂ 3.97 ಕೋಟಿ ಆದ್ಯತಾ ಪಡಿತರ ಚೀಟಿದಾರರಿಗೆ ಪ್ರಯೋಜನ ಆಗಲಿದೆ. ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಈ ಯೋಜನೆಗ ಅನುಷ್ಠಾನಕ್ಕಾಗಿ ಪ್ರಸ್ತುತ ಬಜೆಟ್‌ನಲ್ಲಿ 10 ಸಾವಿರ ಕೋಟಿ ಹಣ ನಿಗದಿ ಮಾಡಲಾಗಿದೆ. ಯೋಜನೆಗೆ ಜಾರಿಯ ಹಿನ್ನೆಲೆಯಲ್ಲಿ ಜುಲೈ ತಿಂಗಳ ಹಣ ಈ ತಿಂಗಳೊಳಗಾಗಿ ಜಮೆ ಆಗಲಿದೆ.
ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಆರೋಪ ಪ್ರತ್ಯಾರೋಪ ನಡೆದಿತ್ತು. ಕೇಂದ್ರ ಉದ್ದೇಶಪೂರ್ವಕವಾಗಿ ಯೋಜನೆಗೆ ಅಕ್ಕಿಯನ್ನು ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಅಕ್ಕಿ ದಾಸ್ತಾನು ಇದ್ದರೂ ಪ್ರತಿ ಕೆಜಿಗೆ 34 ರೂಪಾಯಿ ಕೊಡಲು ನಾವು ತಯಾರಿದ್ದರೂ ಅಕ್ಕಿ ಕೊಡುತ್ತಿಲ್ಲ. ಎಫ್‌ಸಿಐ ಮೊದಲು ಅಕ್ಕಿ ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದರೂ ಬಳಿಕ ನಿರಾಕರಣೆ ಮಾಡಿದೆ. ಇದರ ಹಿಂದೆ ಕೇಂದ್ರದ ರಾಜಕೀಯ ಇದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು ಆರೋಪ ಮಾಡಿದ್ದರು.
ಅಕ್ಕಿ ಸಿಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿಯ ಬದಲಾಗಿ ಹಣ ನೀಡಲು ಸರ್ಕಾರ ನಿರ್ಧಾರ ಮಾಡಿತ್ತು. ಆದರೆ 10 ಕೆಜಿ ಅಕ್ಕಿ ಪೈಕಿ 5 ಕೆಜಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಟ್ಟು 10 ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳಿಗೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.
ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ಕಾರ್ಯ ಜು.10ರಿಂದ ಶುರುವಾಗಲಿದ್ದು, ಕೋಲಾರ ಮತ್ತು ಮೈಸೂರಿನಲ್ಲಿ ಪ್ರಾಯೋಗಿಕವಾಗಿ ನಗದು ವರ್ಗಾವಣೆ ಆರಂಭವಾಗಲಿದೆ. ತಿಂಗಳಾಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ.
ನಗದು ವರ್ಗಾವಣೆ ಪ್ರಕ್ರಿಯೆ ಪ್ರಾಯೋಗಿಕವಾಗಿ ಕೋಲಾರ ಹಾಗೂ ಮೈಸೂರು ಜಿಲ್ಲೆಗಳಿಂದ ಶುರುವಾಗಲಿದ್ದು, ಜುಲೈ ಅಂತ್ಯದ ವೇಳೆಗೆ ಎಲ್ಲ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಐದು ಕೆಜಿ ಅಕ್ಕಿಯ ಹಣ ಜಮೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಹೊಂದಿರುವ ಆಹಾರ ತಂತ್ರಾಂಶದಲ್ಲಿ ಲಭ್ಯವಿರುವಂತಹ ದತ್ತಾಂಶ ಮಾಹಿತಿಯನ್ನು ಬಳಸಿಕೊಂಡು ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಕುಟುಂಬಗಳ (ಪಿಎಚ್‌ಎಚ್) ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ನಗದು ವರ್ಗಾವಣೆಯಾಗಲಿದೆ.
ಪಡಿತರ ಅಗತ್ಯವಿರುವಂತಹ ಕುಟುಂಬಗಳಿಗೆ ಮಾತ್ರವೇ ನಗದು ವರ್ಗಾವಣೆ ಮಾಡಲು ಯೋಜನೆ ರೂಪಿಸಿರುವಂತಹ ಸರಕಾರವು, ಕಳೆದ ಮೂರು ತಿಂಗಳಲ್ಲಿ ಒಮ್ಮೆಯಾದರೂ ಪಡಿತರ ಆಹಾರ ಧಾನ್ಯಗಳನ್ನು ಪಡೆದುಕೊಂಡಿರುವಂತಹ ಕುಟುಂಬಗಳಿಗೆ ಮಾತ್ರವೇ ನಗದು ವರ್ಗಾವಣೆ ಮಾಡಲಿದೆ. ಇದರೊಂದಿಗೆ ಪಡಿತರ ಚೀಟಿಯ ಮುಖ್ಯಸ್ಥರ ಆಧಾರ್ ಜೋಡಣೆ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ.
ಅಕ್ರಮವಾಗಿ ತಂಗಿದ್ದ 105 ವಿದೇಶಿಗರು ಗಡಿಪಾರು, 240 ಪ್ರಕರಣಗಳು ದಾಖಲು: ಜಿ ಪರಮೇಶ್ವರ್
ಬೆಂಗಳೂರು: 2023ರ ಮೇ ಅಂತ್ಯದವರೆಗೆ ಅಧ್ಯಯನ, ವ್ಯಾಪಾರ ಮತ್ತು ಇತರ ಉದ್ದೇಶಗಳಿಗಾಗಿ ಬೆಂಗಳೂರಿಗೆ (Bengaluru) ಬಂದಿದ್ದ 678 ವಿದೇಶಿ ಪ್ರಜೆಗಳು (Foreign Nationals) ವೀಸಾ (Visa) ಅವಧಿ ಮುಗಿದ ನಂತರವೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ (Karnataka Government) ತಿಳಿಸಿದೆ. ಗುರುವಾರ ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಎಂ ನಾಗರಾಜು (M Nagaraju) ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ (G Parameshwara) ಅವರು, ವೀಸಾ ಅವಧಿ ಮುಗಿದ ನಂತರವೂ ನಗರದಲ್ಲಿ ಉಳಿದುಕೊಂಡಿದ್ದ ವಿದೇಶಿ ಪ್ರಜೆಗಳ ವಿರುದ್ಧ ಬೆಂಗಳೂರು ನಗರ ಪೊಲೀಸರು ಸುಮಾರು 240 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳು ಕಳೆದ 30 ತಿಂಗಳುಗಳಲ್ಲಿ (ಜನವರಿ 2021 ಮತ್ತು ಜೂನ್ 2023 ರ ನಡುವೆ) ದಾಖಲಾಗಿವೆ. ಅದೇ ಅವಧಿಯಲ್ಲಿ ರಾಜ್ಯ ಸರ್ಕಾರ 105 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.
ಗೃಹ ಇಲಾಖೆಯ ಅಂಕಿಅಂಶಗಳ ಪ್ರಕಾರ ಬೆಂಗಳೂರು ನಗರ ಪೊಲೀಸರು 2021 ರಲ್ಲಿ 121, 2022 ರಲ್ಲಿ 104 ಮತ್ತು 2023 ರಲ್ಲಿ 15 (ಜೂನ್ ಅಂತ್ಯದವರೆಗೆ) ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸರ್ಕಾರವು 2021 ರಲ್ಲಿ 56, 2022 ರಲ್ಲಿ 41 ಮತ್ತು 2023 ರಲ್ಲಿ ಎಂಟು ವಿದೇಶಿಯರನ್ನು ಗಡೀಪಾರು ಮಾಡಿದೆ.
ಕೆಲವು ವಿದೇಶಿ ಪ್ರಜೆಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಈ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರಕ್ಕೆ ತಿಳಿದಿದೆಯೇ ಎಂದು ಎಂಎಲ್ಸಿ ಎಂ ನಾಗರಾಜು ಪ್ರಶ್ನಿಸಿದರು.
ಸರ್ಕಾರವು ಈ ಬಗ್ಗೆ ತಿಳಿದಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಪ್ರಯತ್ನದಲ್ಲಿ, ವಿವಿಧ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬರುವ ವಿದೇಶಿ ಪ್ರಜೆಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಗೃಹ ಸಚಿವರು ತಿಳಿಸಿದರು.