ಗುಲಾಬ್ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್
Twitter
Facebook
LinkedIn
WhatsApp
ಚೆನೈ, ನವೆಂಬರ್ 29:ನೀವು ಎಂತದ್ದೇ ಭೋಜನ ಮಾಡಿ ಕೊನೆಯಲ್ಲೊಂದು ಸಿಹಿ ತಿಂಡಿ ಇದ್ದರೆ ಊಟ ಸಂಪೂರ್ಣ ಎನಿಸುವುದು. ಯಾವುದೇ ಹೊಸ ಕಾರ್ಯ ಆರಂಭ ಮಾಡಿದರೆ, ಏನಾದರೂ ಸಮಾರಂಭಗಳಿದ್ದರೆ, ಏನಾದರೂ ವಿಶೇಷ ದಿನಗಳಿದ್ದರೆ ಸಿಹಿ ಹಂಚುವುದು ಸಾಮಾನ್ಯ. ಸಿಹಿ ತಿಂಡಿ ತಿಂದವರು ಮನಸಾರೆ ಹರಿಸಿದರೆ ಅಂದುಕೊಂಡ ಕಾರ್ಯ ಯಶಸ್ವಿ ಎನ್ನುವ ಮಾತಿದ್ದು, ಸಿಹಿಗೆ ಅದರದ್ದೇ ಆದ ಶ್ರೇಷ್ಠತೆ ಇದೆ.
ಲಡ್ಡು, ಹೋಳಿಗೆ, ಮೈಸೂರು ಪಾಕ್, ರಸ ಗುಲ್ಲ, ಪಾಯಸ ಹೀಗೆ ಸಾಲು ಸಾಲು ಸಿಹಿ ತಿಂಡಿಗಳ ಪಟ್ಟಿಯಲ್ಲಿ ಗುಲಾಬ್ ಜಾಮೂನ್ ಅಗ್ರ ಸ್ಥಾನದಲ್ಲಿಯೇ ನಿಲ್ಲುತ್ತದೆ. ಯಾಕೆಂದರೆ ಗುಲಾಬ್ ಜಾಮೂನ್ ಅಭಿಮಾನಿಗಳು ಮನೆಯಲ್ಲೊಬ್ಬರು ಇದ್ದೇ ಇರುತ್ತಾರೆ. ಗುಲಾಬ್ ಜಾಮೂನ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಳೆಯರಿಂದ ಹಿರಿಯವರೆಗೆ ಸುಲಭವಾಗಿ ಸವಿಯಬಹುದಾದ ಈ ಸಿಹಿ ತಿಂಡಿಗೆ ಫ್ಯಾನ್ ಫಾಲೋವರ್ಸ್ ತುಂಬಾ.
ತುಂಬಾ ರುಚಿ, ಸುಲಭವಾಗಿ ಮಾಡಬಹುದಾದ ಗುಲಾಬ್ ಜಾಮೂನ್ ರುಚಿ ಸವಿಯದವರ ಸಂಖ್ಯೆ ಅತಿ ವಿರಳ. ತನ್ನ ಲುಕ್‌ನಲ್ಲೇ ತಿಂಡಿ ಪ್ರಿಯರನ್ನು ತನ್ನತ್ತ ಸೆಳೆಯುವ ಈ ಗುಲಾಬ್ ಜಾಮೂನ್ ಹೋಲೆಟ್‌ಗಳಲ್ಲಿ, ಬೇಕರಿಗಳಲ್ಲಿ ಅವರೇ ತಯಾರಿಸಿದ ಸಿಹಿ ಸಿಕ್ಕರೆ, ಇತ್ತೀಚಿಗೆ ರೆಡಿಮೆಡ್ ಜಾಮೂನ್, ಮಿಕ್ಸ್‌ಗಳು ಸಿಗುತ್ತದೆ. ಗುಲಾಬ್ ಜಾಮೂನ್ ಇಷ್ಟವೆಂದು ಕಂಡ ಕಂಡಲ್ಲಿ ಇದನ್ನು ಖರೀದಿಸಿ ತಿನ್ನುವವರು ಈ ಸ್ಟೋರಿ ಓದಲೇ ಬೇಕು.
ಸಿಹಿ ಪಾಕದಲ್ಲಿ ಅದ್ದಿದ ಮೆತ್ತನೆಯ ಗುಲಾಬ್ ಜಾಮೂನ್, ಬಿಸಿ ಬಿಸಿ ಪಾಕದ ಘಮ ನಿಮ್ಮ ಮೂಗಿಗೆ ಬಡಿದು, ಬಾಯಲ್ಲಿ ನೀರು ಬರುತ್ತಿರಲು, ಇನ್ನೇನು ಚಮಚದಿಂದ ಒಂದು ಗುಲಾಬ್ ಜಾಮೂನ್ ಎತ್ತಿ ಬಾಯಿಗೆ ಇಡಬೇಕು ಅಷ್ಟರಲ್ಲಿ..ಕಂದು ಕಂದು ಜಾಮೂನ್ ಮೇಲೆ ಬಿಳಿ ಬಿಳಿ ಬಣ್ಣದ ಹುಳುಗಳ ಸಂಚಾರ ಕಂಡರೆ ನಿಮಗೆ ಹೇಗಾಗಬೇಡ..? ಇದಕ್ಕಿಂದ ನಿರಾಸೆ ಬೇರೊಂದಿದೆಯೇ..?
ಹೌದು ಇದೇ ರೀತಿಯ ನಿರಾಸೆ ಫುಡ್ ಬ್ಲಾಗರ್‌ರೊಬ್ಬರು ಅನುಭವಿಸಿದ್ದಾರೆ. ಟಿಎನ್ 38 ಫುಡ್ಡಿ ಎನ್ನುವ ಬ್ಲಾಗರ್‌ರೊಬ್ಬರು ಗುಲಾಬ್ ಜಾಮೂನ್ ಮೇಲೆ ಬಿಳಿ ಹುಳ ಓಡಾಡುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಗುಲಾಬ್ ಜಾಮೂನ್‌ಗಳ ಮೇಲೆ ಚಿಕ್ಕ ಚಿಕ್ಕ ಬಿಳಿ ಹುಳ ಓಡಾಡುತ್ತಿರುವುದನ್ನು ಕಾಣಬಹುದುದಾಗಿದೆ.
ವೈರಲ್ ಆದ ವಿಡಿಯೋದಲ್ಲಿ ಗುಲಾಬ್ ಜಾಮೂನ್ ಬಾಕ್ಸ್ ಕೂಡ ತೋರಿಸಲಾಗಿದ್ದು, ಬಾಕ್ಸ್ನಲ್ಲಿ ಚೆನ್ನೈನ ಅಶೋಕ್ ನಗರದಲ್ಲಿರುವ ಅಡ್ಯಾರ್ ಆನಂದ ಭವನದ ಔಟ್‌ಲೆಟ್‌ಅನ್ನು ಉಲ್ಲೇಖಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈವರೆಗೂ ಐದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ.
ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಫುಡ್ ಬ್ಲಾಗರ್‌ಗೆ ನೋಡುಗರು ಧನ್ಯವಾದ ತಿಳಿಸಿದ್ದು, ನಿಮ್ಮ ಪ್ರಾಮಾಣಿಕ ರಿವ್ಯೂಗಾಗಿ ಥ್ಯಾಂಕ್ಸ್ ಎಂದಿದ್ದಾರೆ. ಅದೇನೇ ಇರಲಿ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿ ಬಿಟ್ಟು ಹೊರಗಡೆ ಗುಲಾಬ್ ಜಾಮೂನ್ ತಿನ್ನುವಾಗ ಎಚ್ಚರವಹಿಸಿ.