ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಾಜ್ಯದಲ್ಲಿ ದತ್ತು ಸ್ವೀಕಾರ ಕಾನುನು ಹೇಗಿದೆ; ಸೋನು ಶ್ರೀನಿವಾಸ್ ಗೌಡಗೆ ಸಂಕಷ್ಟ ಎದುರಾಗಿದ್ದು ಹೇಗೆ.?

Twitter
Facebook
LinkedIn
WhatsApp
ರಾಜ್ಯದಲ್ಲಿ ದತ್ತು ಸ್ವೀಕಾರ ಕಾನುನು ಹೇಗಿದೆ; ಸೋನು ಶ್ರೀನಿವಾಸ್ ಗೌಡಗೆ ಸಂಕಷ್ಟ ಎದುರಾಗಿದ್ದು ಹೇಗೆ.?

ಬೆಂಗಳೂರು:ಮಕ್ಕಳಿಲ್ಲದ ದಂಪತಿಗಳು ಅಥವಾ ಒಬ್ಬಂಟಿಯಾಗಿರುವವರು ದತ್ತು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಕಾನೂನು ಮಾತ್ರ ಸುಲಭವಿಲ್ಲ. ಹತ್ತಾರು ಪ್ರಕ್ರಿಯೆಗಳನ್ನು ಮುಗಿಸಿಕೊಂಡೇ ದತ್ತು ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದಕ್ಕೆಲ್ಲಾ ಒಪ್ಪಿಗೆ ಪಡೆಯಲೇಬೇಕಾಗುತ್ತದೆ. ಇದಕ್ಕಾಗಿ ಬಹಳಷ್ಟು ಸಮಯವನ್ನು ಮೀಸಲಿಡಬೇಕಾಗುತ್ತದೆ. ಇಲ್ಲದೇ ಇದ್ದರೆ ಅದು ದತ್ತು ಪ್ರಕ್ರಿಯೆ ಆಗುವುದಿಲ್ಲ. ಬದಲಿಗೆ ಮಗುವಿನ ಮಾರಾಟ ಎಂದು ಪರಿಗಣಿಸಿ ಕಾನೂನು ಬಾಹಿರ ಅಡಿ ಬಂದು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನಟಿ ಸೋನು ಶ್ರೀನಿವಾಸಗೌಡ ಅವರೂ ಕೂಡ ಮಗು ದತ್ತು ಪಡೆದು ಈಗ ಬಂಧನಕ್ಕೆ ಒಳಗಾಗಿದ್ಧಾರೆ. ಅವರು ಯಾವುದೇ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಪೋಷಕರಿಂದಲೇ ಖರೀದಿಸಿರುವುದು ಅಕ್ರಮ ದತ್ತು ಎಂದೇ ಪರಿಗಣಸಲ್ಪಟ್ಟಿದೆ.

ಕಠಿಣ ಕಾನೂನು, ಸರಳ ಪ್ರಕ್ರಿಯೆ

ಕರ್ನಾಟಕದಲ್ಲಿ ದಶಕದ ಹಿಂದೆ ಮಕ್ಕಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿತ್ತು. ಅದೂ ಉತ್ತರ ಕರ್ನಾಟಕದಲ್ಲಿ ಈ ಪ್ರಮಾಣ ಹೊಂಚೇ ಹೆಚ್ಚೇ ಇತ್ತು. ಮಕ್ಕಳು ಬಯಸುವವರು ಒಂದು ಕಡೆಯಾದರೆ, ಬಡತನ ಹಾಗೂ ಸಾಮಾಜಿಕ ಕಾರಣದಿಂದ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಾರಾಟ ಮಾಡುತ್ತಿದ್ದರು. ಇದು ಮಧ್ಯವರ್ತಿಗಳನ್ನು ಹುಟ್ಟು ಹಾಕಿ ದಂದೆಯ ಸ್ವರೂಪವನ್ನ ಪಡೆದುಕೊಂಡಿತ್ತು. ಈ ಕಾರಣದಿಂದಲೇ ದತ್ತು ಪ್ರಕ್ರಿಯೆಯನ್ನು ಬಿಗಿ ಹಾಗೂ ಪಾರದರ್ಶಕವಾಗಿ ರೂಪಿಸಲಾಗಿದೆ. ಇಲ್ಲದೇ ಇದ್ದರೆ ಅದು ಅಕ್ರಮ ಎಂದೇ ಪರಿಗಣನೆಗೊಂಡು ಮಗು ಖರೀದಿಸಿದವರ ಜತೆಗೆ ಮಾರಾಟ ಮಾಡಿದವರೂ ಜಾಮೀನು ರಹಿತ ಬಂಧನಕ್ಕೆ ಒಳಗಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಕರ್ನಾಟಕದಲ್ಲಿ ಮಗುವನ್ನು ದತ್ತು ಪಡೆಯಬೇಕು ಎಂದು ನ್ಯಾಯಾಲಯದ ಅನುಮತಿ ಬೇಕೇಬೇಕು. ಮಕ್ಕಳ ಸಮಿತಿ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಹಿರಿತನದ ಆಧಾರದ ಮೇಲೆ ಮಗು ಹಂಚಿಕೆ ಮಾಡಲಾಗುತ್ತದೆ. ಆದರೂ ಅದು ಸುಲಭವಲ್ಲ. ಹತ್ತಾರು ಪ್ರಕ್ರಿಯೆಗಳನ್ನು ದಾಟಿಕೊಂಡು ಬರಬೇಕು. ಈ ರೀತಿ ಕರ್ನಾಟಕದಲ್ಲಿ ನಿತ್ಯ ದತ್ತು ನಡೆಯುತ್ತಲೇ ಇರುತ್ತವೆ.

ಇನ್ನು ದತ್ತು ಹೆಸರಿನಲ್ಲಿ ಮಗುವಿನ ಮಾರಾಟ ಪ್ರಕ್ರಿಯೆಗಳು ನಡೆಯುತ್ತವೆ. ಕೊಡುವವರು ಹಾಗೂ ಪಡೆಯುವವರು ಇದನ್ನು ದತ್ತು ಎಂದರೂ ನ್ಯಾಯಾಲಯದ ಒಪ್ಪಿಗೆ ಇಲ್ಲದೇ ಮಾಡಿದರೆ ಅಕ್ರಮ ಆಗುತ್ತದೆ. ಕೆಲವೊಮ್ಮೆ ಹಣದ ಆಸೆಗಾಗಿ ದತ್ತು ಪ್ರಕ್ರಿಯೆ ನಡೆದು ಕೊನೆಗೆ ಮುರಿದು ಬಿದ್ದ ಉದಾಹರಣೆಗಳೂ ಸಾಕಷ್ಟಿವೆ. ಇವೆಲ್ಲವೂ ಅಕ್ರಮವೇ.

ಸೋನು ಶ್ರೀನಿವಾಸ ಗೌಡ ಪ್ರಕರಣ

ರೀಲ್ಸ್‌ ನಟಿ ಸೋನು ಶ್ರೀನಿವಾಸ್‌ ಗೌಡ ಕೂಡ ಎಡವಿದ್ದು ಇಲ್ಲಿಯೇ. ಪರಿಚಯಸ್ಥರ ಕಡೆಯಿಂದ ಮಗುವನ್ನು ದತ್ತು ತೆಗೆದುಕೊಂಡರು. ಆದರೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೇ ಇದ್ದುದರಿಂದ ಅದನ್ನು ಅಕ್ರಮ ಎಂದೇ ಪರಿಗಣಿಸಲಾಗಿದೆ. ದೂರು ಬಂದ ತಕ್ಷಣವೇ ಮಕ್ಕಳ ಸಮಿತಿ ಹಾಗೂ ಪೊಲೀಸರು ಕಾನೂನು ರೀತಿಯಲ್ಲಿಯೇ ಅವರನ್ನು ಬಂಧಿಸಿದ್ದಾರೆ. ಕಾನೂನು ಗೊತ್ತಿಲ್ಲ ಎನ್ನುವುದು ಕ್ಷಮೆಗೆ ಅರ್ಹವಲ್ಲ ಎನ್ನುವುದು ಹಿರಿಯರೊಬ್ಬರ ಅಭಿಪ್ರಾಯ.

ದಶಕದ ಹಿಂದೆ ಮಗುವನ್ನು ದತ್ತು ಪಡೆದ ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ್‌ ಅವರ ಪ್ರಕಾರ, ನಮ್ಮ ಮಗು ತೀರಿಕೊಂಡಿದ್ದರಿಂದ ದತ್ತು ಪಡೆಯಲು ತೀರ್ಮಾನಿಸಿದೆವು. ಅನ್‌ಲೈನ್‌ನಲ್ಲಿಯೇ ಅರ್ಜಿ ಹಾಕಿದೆವು. ಆನಂತರ ಕಾನೂನಿನ ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ಮಗು ನಮಗೆ ಹಸ್ತಾಂತರಿಸಲಾಯಿತು. ಈಗ ಮಗಳು ಏಳನೇ ತರಗತಿ ಓದುತ್ತಿದ್ದಾಳೆ. ಕೆಲವೊಂದು ಪೋಷಕರು ದತ್ತು ಪಡೆದಿದ್ದರೂ ಮಗುವಿನ ವಿವರವನ್ನು ಬಹಿರಂಗಪಡಿಸುವುದಿಲ್ಲ. ಇದು ಮಗುವಿನ ಹಿತದೃಷ್ಟಿಯಿಂದ ಒಳ್ಳೆಯದು. ಆದರೆ ನ್ಯಾಯಾಲಯದ ಮಾನ್ಯತೆಯಿಲ್ಲದೇ ದತ್ತು ಪಡದರೇ ಅದು ಅಕ್ರಮವೇ ಆಗುತ್ತದೆ. ಸೋನು ಶ್ರೀನಿವಾಸ ಗೌಡ ಅವರ ಪ್ರಕರಣವೂ ಅದರಲ್ಲಿ ಒಂದು. ಸರ್ಕಾರವೂ ಪಾರದರ್ಶಕ ನೀತಿಯನ್ನು ರೂಪಿಸುವ ಮೂಲಕ ದತ್ತು ಪ್ರಕ್ರಿಯೆ ಸುಲಭಗೊಳಿಸಿದೆ. ಅಕ್ರಮ ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ್ದು, ಸಿಕ್ಕಿಬಿದ್ದವರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವಿವರಿಸುತ್ತಾರೆ.

ಕರ್ನಾಟಕದಲ್ಲಿ ದತ್ತು ಕಾಯಿದೆ ಅಡಿ ಇರುವುದು ಎರಡು ವಿಧಾನ

1. ದಿ ಹಿಂದೂ ಅಡಾಪ್ಸನ್ ಆ್ಯಂಡ್ ಮೇಯಿಂಟೆನೆನ್ಸ್ ಆ್ಯಕ್ಟ್ 1956 (ಎಚ್‌ಎಎಂಎ)

2. ದಿ. ಗಾರ್ಡಿಯನ್‌ಶಿಪ್ ಆ್ಯಂಡ್ ವಾರ್ಡ್ಸ್ ಆ್ಯಕ್ಟ್-1890(ಜಿಡಬ್ಲುಎ)

ಹಿಂದೂ ಅಡಾಪ್ಸನ್ ಆ್ಯಂಡ್ ಮೇಯಿಂಟೆನೆನ್ಸ್ ಆ್ಯಕ್ಟ್-1956ರ ಪ್ರಕಾರ ಕೇವಲ ಹಿಂದೂಗಳು ಮಾತ್ರ ದತ್ತು ತೆಗೆದುಕೊಳ್ಳಬಹುದಾಗಿದ್ದು ಈ ಕಾಯ್ದೆಯ ಪ್ರಕಾರ ದತ್ತು ತೆಗೆದುಕೊಂಡ ಮಗುವಿಗೆ ನೈಜ ಮಗುವಿಗೆ ದೊರಕುವ ಎಲ್ಲ ಹಕ್ಕುಗಳು ಮತ್ತು ಸೌಲಭ್ಯಗಳನ್ನು ದತ್ತು ಮಕ್ಕಳು ಹೊಂದಲು ಅವಕಾಶವಿರುತ್ತದೆ. ಈ ಕಾಯ್ದೆಯಡಿ ನೀಡಿದ ದತ್ತಕವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ.ಗಾರ್ಡಿಯನ್‌ಶಿಪ್(ಸಂರಕ್ಷಕತ್ವ) ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಮುಂತಾದ ಧರ್ಮದಲ್ಲಿ ಅವರ ವೈಯಕ್ತಿಕ ಕಾನೂನು ದತ್ತು ಸ್ವೀಕಾರವನ್ನು ಪೂರ್ಣ ಸಮ್ಮತಿಸುವುದಿಲ್ಲವಾದ ಕಾರಣ ಈ ಧರ್ಮಗಳಿಗೆ ಸೇರಿದವರು ಗಾರ್ಡಿಯನ್‌ಶಿಪ್ ಆ್ಯಂಡ್ ವಾರ್ಡ್ಸ್ ಆ್ಯಕ್ಟ್ 1890ರ ಪ್ರಕಾರ ದತ್ತು ತೆಗೆದುಕೊಳ್ಳಬೇಕಾಗುತ್ತದೆ. ಈ ಕಾಯ್ದೆಯ ಪ್ರಕಾರ ಮಗುವು ಪ್ರಬುದ್ಧನಾಗುವವರೆಗೂ ದತ್ತು ಪಡೆದ ಪೋಷಕರು ಮತ್ತು ಮಗುವಿನ ನಡುವೆ ಕೇವಲ ಪೋಷಕರು-ಆಶ್ರಿತರ ಸಂಬಂಧ ಮಾತ್ರ ಇರುತ್ತದೆ.

ಮಗುವನ್ನು ದತ್ತು ಪಡೆಯಲು ಬೇಕಾದ ಅರ್ಹತೆ

ದತ್ತು ತೆಗೆದುಕೊಳ್ಳುವ ಮಗು ಹಾಗೂ ದತ್ತು ಪಡೆಯುವ ಪಾಲಕರ ನಡುವೆ ವಯಸ್ಸಿನ ಅಂತರ 45 ವರ್ಷಗಳಿಗೆ ಮೀರಿರಬಾರದು. ಎರಡನೇ ದತ್ತಕದ ಸಂದರ್ಭದಲ್ಲಿ ಈ ಅಂತರವು 50 ವರ್ಷಗಳಿಗೆ ಮೀರಿರಬಾರದು. ದತ್ತು ಪಡೆಯುವ ಪಾಲಕರು ವಿವಾಹವಾಗಿ ಕನಿಷ್ಠ 5 ವರ್ಷಗಳಾಗಿರಬೇಕು. ದತ್ತು ಪಡೆಯುವ ಪಾಲಕರ ವರಮಾನ ಮಾಸಿಕ ಕನಿಷ್ಠ 5,000 ರೂ. ಇರಬೇಕು.

ಅದೇ ಒಂಟಿ ಪಾಲಕರಾಗಿದ್ದಲ್ಲಿ ದತ್ತು ಪಡೆಯುವ ಒಂಟಿ ಪಾಲಕರ ವಯಸ್ಸು 30 ವರ್ಷ ಮೇಲಿರಬೇಕು. ದತ್ತು ಪಡೆಯುವ ಮಗು ಹಾಗೂ ಒಂಟಿ ಪಾಲಕರ ನಡುವಿನ ವಯಸ್ಸಿನ ಅಂತರ 21 ವರ್ಷಗಳಾಗಿರಬೇಕು.

ಅಕ್ರಮ ಹೇಗಾಗುತ್ತದೆ

ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ವಾಲಂಟರಿ ಕೋ-ಆರ್ಡಿನೇಟಿಂಗ್ ಏಜೆನ್ಸಿ ಅಥವಾ ದತ್ತು ಸ್ವೀಕಾರ ನಡೆಸಲು ಮನ್ನಣೆ ಪಡೆದಿರುವ ಸಂಸ್ಥೆಗಳನ್ನು ಸಂಪರ್ಕಿಸಿ ದತ್ತು ಪಡೆಯಲು ಬೇಕಾದ ದಾಖಲೆ, ಕಾನೂನಿನ ಅಂಶಗಳು, ಅಂದಾಜು ವೆಚ್ಚದ ಮಾಹಿತಿ ನೀಡಲಾಗುತ್ತದೆ. ದತ್ತು ಸ್ವೀಕಾರ ಪಡೆಯಲಿಚ್ಛಿಸುವ ಪಾಲಕರು ಕೆಲವು ದಾಖಲೆಗಳೊಂದಿಗೆ ನೋಂದಣಿ ಮಾಡಿಸಬೇಕಾಗುತ್ತದೆ. ಇದಕ್ಕೆ ತನಿಖಾ ವರದಿ, ಸ್ಥಳ ತಪಾಸಣೆ, ಪ್ರಕ್ರಿಯೆ ನಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ನ್ಯಾಯಾಧೀಶರು ದತ್ತು ಪಡೆಯುವವರು, ಕೊಡುವವರ ಹೇಳಿಕೆಯನ್ನು ದಾಖಲಿಸಿ ಪ್ರಕ್ರಿಯೆ ಅಧಿಕೃತಗೊಳಿಸುತ್ತಾರೆ.

ನ್ಯಾಯಾಲಯದ ಅನುಮತಿ ಇಲ್ಲದೇ ಈ ಪ್ರಕ್ರಿಯೆ ಮಾಡುವ ಹಾಗೆಯೇ ಇಲ್ಲ. ಹೀಗೆ ಮಾಡಿದರೆ ಮಾತ್ರ ಸಕ್ರಮ. ಇಲ್ಲದೇ ಇದ್ದರೆ ಅಕ್ರಮ. ಇಷ್ಟೆಲ್ಲಾ ಪ್ರಕ್ರಿಯೆ ಇಂದೆ ಇರುವುದು ಮಗುವಿನ ಕಾಳಜಿ ಹಾಗೂ ಮಾರಾಟವಾಗದಂತೆ ತಡೆಯುವ ಉದ್ದೇಶ. ಕರ್ನಾಟಕದಲ್ಲಿ ಬಹುತೇಕ ದತ್ತುಗಳು ಕಾನೂನು ಬದ್ದವಾಗಿದ್ದರೂ ಅಲ್ಲಲ್ಲಿ ಮಾರಾಟದ ಉದ್ದೇಶ ಇಲ್ಲವೇ ಕಾನೂನಿನ ಅರಿವಿಲ್ಲದೇ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸುವುದೂ ನಡೆದಿದೆ. ದತ್ತು ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿಗಳು ವಿವರಿಸುತ್ತಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ