Weather Today: ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ; ದೆಹಲಿ, ಪಂಜಾಬ್ನಲ್ಲಿ ಮಳೆ ಸಾಧ್ಯತೆ
ನವದೆಹಲಿ: ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಇಂದು (ಜನವರಿ 20) ಲಘು ಮಳೆಯಾಗಲಿದೆ (Rainfall) ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹಾಗೇ, ಮುಂದಿನ 48 ಗಂಟೆಗಳ ಕಾಲ ಹಿಮಾಚಲ ಪ್ರದೇಶದ (Himachal Pradesh) ಹೆಚ್ಚಿನ ಪ್ರದೇಶಗಳಲ್ಲಿ ಭಾರೀ ಹಿಮಪಾತ (Snowfall) ಮತ್ತು ಮಳೆಯ ಮುನ್ಸೂಚನೆ ನೀಡಲಾಗಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್‌ನಲ್ಲಿ ಜನವರಿ 22ರವರೆಗೆ ಲಘುವಾಗಿ ಮಳೆ ಮತ್ತು ಹಿಮಪಾತ ಉಂಟಾಗಲಿದೆ. ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಜನವರಿ 23-26ರ ಅವಧಿಯಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ದೆಹಲಿಯಲ್ಲಿ ಜನವರಿ 23ರಿಂದ 25ರವರೆಗೆ ಮಳೆ ಬೀಳುವ ನಿರೀಕ್ಷೆಯಿದೆ.
ಒಡಿಶಾ, ಅಸ್ಸಾಂ, ಮೇಘಾಲಯ ಮತ್ತು ತ್ರಿಪುರಾದ ಹಲವು ಪ್ರದೇಶಗಳಲ್ಲಿ ಜನವರಿ 23ರ ಅವಧಿಯಲ್ಲಿ ದಟ್ಟವಾದ ಮಂಜು ಆವರಿಸುವ ಸಾಧ್ಯತೆಯಿದೆ. ವಾಯುವ್ಯ ಭಾರತದ ಸೀವ್ರಾಲ್ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸುಮಾರು 2 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮಧ್ಯಪ್ರದೇಶದಲ್ಲಿ ಕನಿಷ್ಠ ತಾಪಮಾನದಲ್ಲಿ 3ರಿಂದ 5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.
ಮುಂದಿನ ವಾರ 5 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. IMD ಪ್ರಕಾರ, ಹಿಮಾಚಲ ಪ್ರದೇಶವು ಜನವರಿ 23ರಿಂದ 26ರವರೆಗೆ ಭಾರೀ ಹಿಮಪಾತ ಮತ್ತು ಮಳೆಗೆ ಸಾಕ್ಷಿಯಾಗಲಿದೆ. ಲಾಹೌಲ್-ಸ್ಪಿತಿ, ಕುಲು, ಕಿನ್ನೌರ್ ಮತ್ತು ಚಂಬಾದ 3ರಿಂದ 4 ಜಿಲ್ಲೆಗಳಲ್ಲಿ 5 ಸೆಂ.ಮೀ ಹಿಮಪಾತ ದಾಖಲಾಗಿದೆ.
“ಎಲ್ಲ ರೀತಿಯ ಹವಾಮಾನ ಎಚ್ಚರಿಕೆಗೆ ಸರ್ಕಾರ ಸಿದ್ಧವಾಗಿದೆ. ಭಾರೀ ಹಿಮದ ನಡುವೆ ನಿರ್ಬಂಧಿಸಲಾದ ರಸ್ತೆಗಳನ್ನು ತೆರವುಗೊಳಿಸಲು ತಮ್ಮ ಹಿಮ ತೆರವು ಕಾರ್ಯಾಚರಣೆಯೊಂದಿಗೆ ಸಿದ್ಧರಾಗಿರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.