ರಾಜ್ಯದಲ್ಲಿ 20 ಸೀಟುಗಳನ್ನು ನಾವು ಗೆಲ್ಲುತ್ತೆವೆ: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ರಾಮಮಂದಿರ ಹವಾ, ಮೋದಿ ಹವಾ ಇಲ್ಲ. ನಾವು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಇದು ಸಾಬೀತಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.ಕೆಪಿಸಿಸಿ ಕಚೇರಿ ಇಂದಿರಾ ಭವನದಲ್ಲಿ ನಡೆದ ಗ್ಯಾರಂಟಿ ಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ನಾವುಗಳು ಕೂಡಾ ಹಿಂದೂಗಳು ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸೂಚಿಸಿದರು. ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ಮನೆ ಮನೆಗೆ ಹೋಗಬೇಕು. ತಂಡ ಮಾಡಿ ಹೋಗಬೇಕು. ಓಟರ್ ಲಿಸ್ಟ್ ತಗೊಂಡು ಮನೆ ಮನೆಗೆ ತೆರಳಬೇಕು. ಕಮಲ ಕೆರೆಯಲ್ಲಿ ಚೆಂದ, ತೆನೆ ಹೊಲದಲ್ಲಿ ಇದ್ದರೆ ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಒಳ್ಳೆಯದು ಎಂದರು.
ಐದು ಗ್ಯಾರಂಟಿ ಶಕ್ತಿಯಿಂದ ಜನ ತೆನೆ ಎತ್ತಿ ಬಿಸಾಕಿದ್ದಾರೆ. ಸ್ವಾಭಿಮಾನ ಬಿಡಬೇಕು. ನಾವು ಮೊದಲು ಕಾರ್ಯಕರ್ತರಾಗಿದ್ದೇವೆ. ಪಂಚಾಯತ್ ನಲ್ಲಿ ಲೀಡ್ ಕೊಡಿಸುವ ಕೆಲಸ ಮಾಡಬೇಕು. ಐಡಿ ಕಾರ್ಡ್, ಫೋಟೋ ಅಪ್ ಲೋಡ್ ಮಾಡಿ ಐಡಿ ಹಾಕಿ ಮನೆ ಮನೆಗೆ ಹೋಗಿ ಗ್ಯಾರಂಟಿ ಬಗ್ಗೆ ಮನವರಿಕೆ ಮಾಡಿ ಎಂದು ಸೂಚಿಸಿದರು.
ಪಕ್ಷೇತರ ಸ್ಪರ್ಧೆ ಮಾಡಲ್ಲ: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ
ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಅದರಂತೆ, ಜೆಡಿಎಸ್ ಪಕ್ಷಕ್ಕೆ ಹಾಸನ, ಮಂಡ್ಯ ಕ್ಷೇತ್ರಗಳ ಜೊತೆಗೆ ಇದೀಗ ಕೋಲಾರ (Kolar Lok Sabha Constituency) ಕ್ಷೇತ್ರವನ್ನೂ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ. ಇದರಿಂದಾಗಿ ಹಾಲಿ ಸಂಸದ ಎಸ್ ಮುನಿಸ್ವಾಮಿ (S Muniswamy) ಅವರಿಗೆ ಟಿಕೆಟ್ ಕೈತಪ್ಪಿದೆ. ಈ ಬಗ್ಗೆ ದೆಹಲಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, ತಾನು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷೇತರವಾಗಿ ಸ್ಪರ್ಧೆ ಮಾಡುವುದಿಲ್ಲ. ಹೈಕಮಾಂಡ್ ನಾಯಕರ ನಿರ್ಧಾರವನ್ನು ನಾನು ಒಪ್ಪಲೇಬೇಕಿದೆ. ಅನೇಕ ನಾಯಕರು ಪಕ್ಷಕ್ಕೆ ತ್ಯಾಗ ಮಾಡಿದ್ದಾರೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗಬೇಕು. ಹೀಗಾಗಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲಾಗಿದೆ. ನನ್ನನ್ನು ಏನು ಮಾಡಬೇಕೆಂದು ಪಕ್ಷ ನಿರ್ಧಾರ ಮಾಡಲಿದೆ. ಕೋಲಾರದ ಸದ್ಯದ ಪರಿಸ್ಥಿತಿಯನ್ನು ದೇವೇಗೌಡರಿಗೆ ವಿವರಿಸಿದ್ದೇನೆ.