- ಕ್ರೀಡೆ
- 9:01 ಫೂರ್ವಾಹ್ನ
- ಅಕ್ಟೋಬರ್ 23, 2023
Virat Kohli- Mohammed Shami :ಕೊಹ್ಲಿ- ಶಮಿ ದಾಖಲೆ; ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಗಳ ಜಯ

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 4 ವಿಕೆಟ್ಗಳ ಜಯಗಳಿಸುವ ಮೂಲಕ ಭಾರತ ಏಕದಿನ ವಿಶ್ವಕಪ್ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಅಲ್ಲದೇ 20 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಭಾರತ ಕಿವೀಸ್ ಮಣಿಸಿ, ವಿಶೇಷ ಸಾಧನೆ ಮಾಡಿದೆ. 2003ರ ಬಳಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಗೆಲುವಿನ ನಗೆ ಬೀರಿದೆ.
ಡರಿಲ್ ಮೆಚೆಲ್ ಸೆಂಚುರಿ ಹಾಗೂ ರಾಚಿನ್ ರವೀಂದ್ರ 75 ರನ್ ಹೋರಾಟಿಂದ ನ್ಯೂಜಿಲೆಂಡ್ 273 ರನ್ ಸಿಡಿಸಿತ್ತು. ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಬ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಸ್ಫೋಟಕ ಆರಂಭದಿಂದ ಭಾರತ ದಿಟ್ಟ ಹೋರಾಟ ನೀಡಿತು. ನಾಯಕ ರೋಹಿತ್ ಶರ್ಮಾ 40 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಭಾರತ 71 ರನ್ ಜೊತೆಯಾಟ ನೀಡಿತು.
ರೋಹಿತ್ ಶರ್ಮಾ ವಿಕೆಟ್ ಪತನದ ಬೆನ್ನಲ್ಲೇ ಗಿಲ್ ವಿಕೆಟ್ ಕೈಚೆಲ್ಲಿದರು. ಗಿಲ್ 26 ರನ್ ಸಿಡಿಸಿ ಔಟಾದರು. ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಮೇಲೆ ಜವಾಬ್ದಾರಿ ಹೆಚ್ಚಿತು. ಅಯ್ಯರ್ ಬೌಂಡರಿ ಮೂಲಕವೇ ಅಬ್ಬರಿಸಿದರು. ಆದರೆ 29 ಎಸೆತದಲ್ಲಿ ಶ್ರೇಯಸ್ ಅಯ್ಯರ್ 33 ರನ್ ಸಿಡಿಸಿ ಔಟಾದರು. ಅಯ್ಯರ್ ಬಳಿ ಕೆಎಲ್ ರಾಹಲ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಕೊಹ್ಲಿ ಹಾಗೂ ರಾಹುಲ್ ಜೊತೆಯಾಟದಿಂದ ಭಾರತ ಉತ್ತಮ ಸ್ಥಿತಿ ಕಾಪಾಡಿಕೊಂಡಿತು. ಆಧರೆ ರಾಹುಲ್ 27 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ 2 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. 191 ರನ್‌ಗೆ ಭಾರತ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ಇತ್ತ ರವೀಂದ್ರ ಜಡೇಜಾ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರೆ, ಕೊಹ್ಲಿ ರನ್ ಕುಸಿಯದಂತೆ ನೋಡಿಕೊಂಡರು. ನ್ಯೂಡಿಲೆಂಡ್ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ನಿಂದ ನ್ಯೂಜಿಲೆಂಡ್ ಒತ್ತಡದಲ್ಲಿ ಸಿಲುಕಿತು. ವಿರಾಟ್ ಕೊಹ್ಲಿ 95 ರನ್ ಸಿಡಿಸಿ 5 ರನ್‌ನಿಂದ ಶತಕ ಮಿಸ್ ಮಾಡಿಕೊಂಡರು. ಇತ್ತ ರವೀಂದ್ರ ಜಡೇಜಾ ಅಜೇಯ 39 ರನ್ ಸಿಡಿಸಿದರು. ಈ ಮೂಲಕ ಭಾರತ 48 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಐದು ವಿಕೆಟ್ ಪಡೆದು ದಾಖಲೆ ಬರೆದ ಮೊಹಮ್ಮದ್ ಶಮಿ:
ಒಡಿಐ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಟೀಮ್ ಇಂಡಿಯಾ ಪರ 2 ಬಾರಿ 5 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆಗೆ ವೇಗಿ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ತಮ್ಮ ಈ ಪ್ರದರ್ಶನದಿಂದ ನ್ಯೂಜಿಲೆಂಡ್ ತಂಡವನ್ನು 273 ರನ್ ಗಳಿಗೆ ನಿಯಂತ್ರಿಸಿದ್ದಾರೆ.
ಧರ್ಮಶಾಲಾದ ಎಚ್ ಪಿಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ 4 ಪಂದ್ಯಗಳಿಂದ ಬೆಂಚ್ ಕಾದಿದ್ದ ಮೊಹಮ್ಮದ್ ಶಮಿ, ವೇಗದ ಆಲ್ ರೌಂಡರ್ ಶಾರ್ದುಲ್ ಠಾಕೂರ್ ಜಾಗದಲ್ಲಿ ಸ್ಥಾನ ಪಡೆದಿದ್ದರು. ಪಂದ್ಯದ ತಮ್ಮ ಮೊದಲ ಎಸೆತದಲ್ಲೇ ಸ್ಫೋಟಕ ಆಟಗಾರ ವಿಲ್ ಯಂಗ್ ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ, ನಂತರದ ಓವರ್ ಗಳಲ್ಲೂ ಉತ್ತಮ ಬೌಲಿಂಗ್ ಸಂಯೋಜನೆ ತೋರಿ ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ ಹಾಗೂ ಮ್ಯಾಟ್ ಹೆನ್ರಿ ವಿಕೆಟ್ ಪಡೆದರು. ತಮ್ಮ 10 ಓವರ್ ಗಳಲ್ಲಿ 54 ರನ್ ಬಿಟ್ಟುಕೊಟ್ಟರು. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಶಮಿ 5 ವಿಕೆಟ್ ಪಡೆದಿದ್ದರು.