ಭಾರತದ ಆಟಗಾರರಿಗೆ ಪಾನೀಯ ಕೊಟ್ಟು ವಾಟರ್ ಬಾಯ್ ಆದ ವಿರಾಟ್ ಕೊಹ್ಲಿ; ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್!
ಕೊಲಂಬೊ: ಭಾರತ ಹಾಗೂ ಬಾಂಗ್ಲಾದೇಶ ನಡುವಣ ಶುಕ್ರವಾರ ನಡೆದ 2023ರ ಏಷ್ಯಾ ಕಪ್ ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಾಟರ್ ಬಾಯ್ ಆಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ಒಟ್ಟು ಐವರು ಆಟಗಾರರಿಗೆ ಬಾಂಗ್ಲಾ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ.
ಇಲ್ಲಿನ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಕೊನೆಯ ಸೂಪರ್-4ರ ಪಂದ್ಯಕ್ಕೆ ಭಾರತ ತಂಡದಲ್ಲಿ ಒಟ್ಟು 5 ಬದಲಾವಣೆಯನ್ನು ಮಾಡಲಾಗಿದೆ. ಸೆಪ್ಟಂಬರ್ 17 ರಂದು ನಡೆಯುವ ಫೈನಲ್ ಪಂದ್ಯದ ನಿಮಿತ್ತ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್‌ಗೆ ವಿಶ್ರಾಂತಿ ನೀಡಲಾಗಿದೆ.
On the field or off the field, can't get our eyes off this guy ?#INDvBAN live now only on #DisneyPlusHotstar, free on the mobile app.#FreeMeinDekhteJaao #AsiaCup2023 #AsiaCupOnHotstar #Cricket pic.twitter.com/emqbnrl6Vp
— Disney+ Hotstar (@DisneyPlusHS) September 15, 2023
ಈ ಹಿನ್ನೆಲೆಯಲ್ಲಿ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ ಹಾಗೂ ಪ್ರಸಿಧ್ ಕೃಷ್ಣ ಅವರಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಲಾಗಿದೆ. ಹಾಗಾಗಿ ವಿರಾಟ್ ಕೊಹ್ಲಿ 12ನೇ ಆಟಗಾರನ ಜವಾಬ್ದಾರಿಯನ್ನು ಮೈದಾನದಲ್ಲಿ ನಿರ್ವಹಿಸಿದರು. ಪಂದ್ಯದ ನಾಲ್ಕನೇ ಓವರ್‌ನಲ್ಲಿ ಶಾರ್ದುಲ್ ಠಾಕೂರ್ ಅವರು ತಂಝಿದ್ ಹಸನ್ ಅವರನ್ನು ಔಟ್ ಮಾಡಿದ ಬಳಿಕ ವಿರಾಟ್ ಕೊಹ್ಲಿ ಡ್ರಿಂಕ್ಸ್ ತೆಗೆದುಕೊಂಡು ಆಟಗಾರರ ಬಳಿ ಓಡಿ ಹೋದರು.
ಅಷ್ಟೇ ಅಲ್ಲದೆ ಪೆವಿಲಿಯನ್‌ನಿಂದ ವಿರಾಟ್ ಕೊಹ್ಲಿ ವಿಭಿನ್ನ ನಡಿಗೆಯ ಮೂಲಕ ಹಾಸ್ಯ ಪ್ರವೃತ್ತಿಯನ್ನು ಮೆರೆದರು. ಈ ವಿಡಿಯೋ ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ನೆಟ್ಟಿಗರು ವಿರಾಟ್ ಕೊಹ್ಲಿ ತನ್ನನ್ನು ಸೆಳೆಯುವ ಸಲುವಾಗಿ ಈ ರೀತಿ ನಡೆದುಕೊಂಡಿದ್ದಾರೆಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ದೊಡ್ಡ ಆಟಗಾರನಾಗಿದ್ದರೂ ಅವರು ಯಾವುದೇ ಅಹಂಕಾರವಿಲ್ಲದೆ ಆಟಗಾರರಿಗೆ ವಾಟರ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರದು ದೊಡ್ಡ ಹೃದಯ ಎಂದು ಕೆಲ ಅಭಿಮಾನಿಗಳು ಟೀಮ್ ಇಂಡಿಯಾ ಮಾಜಿ ನಾಯಕನನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.