ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ವಾಟಾಳ್ ನಾಗರಾಜ್ ; ಯಾವ ಕ್ಷೇತ್ರದಿಂದ?

ಬೆಂಗಳೂರು: ದಿನೇ ದಿನೇ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ರಾಜ್ಯದಲ್ಲಿಯೂ ಎಲೆಕ್ಷನ್ ಕಾವು ಜೋರಾಗಿಯೇ ಇದೆ. ಹೊಸ ಬೆಳವಣಿಗೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಬೆಂಗಳೂರು ದಕ್ಷಿಣದ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಎದುರಾಳಿಯಾಗಿ ಮಾಝಿ ಶಾಸಕ ವಾಟಾಳ್ ನಾಗರಾಜ್ ಚುನಾವಣೆ ಎದುರಿಸಲಿದ್ದಾರೆ. ಏನೇ ಮಾಡಿದರೂ ಸದ್ದು ಮಾಡುವ ಅವರು, ಸರಳವಾಗಿ ಆಟೋರಿಕ್ಷಾದಲ್ಲಿ ಬಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣದಿಂದ ವಾಟಾಳ್ ನಾಗರಾಜ್ ಸ್ಪರ್ಧೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ತೇಜಸ್ವಿ ಸೂರ್ಯ. ಈ ಬಾರಿಯೂ ಬಿಜೆಪಿ ಅವರಿಗೆ ಮಣೆ ಹಾಕಿದೆ. ಇನ್ನೂ, ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿಯೇ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುವುದು ಖಂಡಿತ. ಇದರ ಜೊತೆಯಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಮತ್ತಷ್ಟು ರಂಗು ನೀಡಿದೆ.
“ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಕನ್ನಡ ಚಳುವಳಿಯ ನಾಯಕರು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ರವರು ನಾಮಪತ್ರ ಸಲ್ಲಿಸಿದ್ದಾರೆ. ವಾಟಾಳ್ ನಾಗರಾಜ್ ರವರ 65 ವರ್ಷಗಳ ಸುದೀರ್ಘ ಕನ್ನಡ ಚಳವಳಿ ಹೋರಾಟ ಕನ್ನಡಿಗರಿಗಾಗಿ ವಿಧಾನಸಭೆಯಲ್ಲಿ ಹೋರಾಟ ಕಾವೇರಿ ಮಹದಾಯಿ ಬೆಳಗಾವಿ ವಿವಾದ ಸೇರಿದಂತೆ ತಮ್ಮ ಜೀವನದ ಉದ್ದಕ್ಕೂ ಕನ್ನಡಿಗ ಕನ್ನಡಿಗರಿಗಾಗಿಯೇ ಹೋರಾಟ ನಡೆಸುತ್ತಾ ಯಾರೊಂದಿಗೂ ರಾಜಿಯಾಗದೆ ಕನ್ನಡಿಗರ ಪಾಲಿಗೆ ಮಹಾಭಾರತದ ಕರ್ಣನಾಗಿದ್ದಾರೆ. ಕರ್ಣ ಎಂದರೆ ತ್ಯಾಗಿ ತಮ್ಮ ರಾಜಕೀಯ ಜೀವನವನ್ನು ಅಧಿಕಾರಕ್ಕಾಗಿ ಎಲ್ಲಿಯೂ ಯಾರೊಂದಿಗೂ ಒತ್ತೆ ಇಡದೆ ಕನ್ನಡವೇ ತತ್ವ ಕನ್ನಡವೇ ಸಿದ್ದಾಂತ ಕನ್ನಡವೇ ವೇದಾಂತ ಕನ್ನಡವೇ ಹೆಸರು ಕನ್ನಡವ ಉಸಿರು ಎಂದು ಬದುಕುತ್ತಿರುವ ಹೆಮ್ಮೆಯ ಕನ್ನಡ ತಾಯಿಯ ವರಪುತ್ರ ವಾಟಾಳ್ ನಾಗರಾಜ್ ರವರಿಗೆ ನಮ್ಮೆಲ್ಲರ ಮತ ನೀಡಿ ಲೋಕಸಭೆಗೆ ಆಯ್ಕೆ ಮಾಡೋಣ” ಎಂದು ಶ್ರೀ ವಾಟಾಳ್ ನಾಗರಾಜ್ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ.
ಈಡುಗಾಯಿ ಒಡೆಯುವ ಕಾರ್ಯಕ್ರಮ!
ಕನ್ನಡಕ್ಕಾಗಿ, ಕನ್ನಡಿಗರ ಪರವಾಗಿ ಧ್ವನಿ ಎತ್ತಲು ಲೋಕಸಭೆಯಲ್ಲಿ ಕನ್ನಡದ ಕಹಳೆ ಮೊಳಗಿಸಲು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ರಾಜ್ಯದಿಂದ ಇದುವರೆವಿಗೂ ರಾಜ್ಯದಿಂದ ಆಯ್ಕೆಯಾಗಿರುವ ಲೋಕಸಭಾ ಸದಸ್ಯರುಗಳು ಕರ್ನಾಟಕದ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡಿಲ್ಲ ಎಂದು ಆರೋಪಿಸಿರುವ ವಾಟಾಳ್ ನಾಗರಾಜ್ ಅವರು ಈಡುಗಾಯಿ ಒಡೆಯುವ ಕಾರ್ಯಕ್ರಮ ಆಯೋಜಿಸಿದ್ದಾರೆ.
ಕರ್ನಾಟಕದ ಸಮಸ್ಯೆಗಳು ನೂರಾರು. ನೆಲ, ಜಲ, ಭಾಷೆ ಸೇರಿದಂತೆ ಅನೇಕ… ಅನೇಕ…
ಲೋಕಸಭೆಯಲ್ಲಿ ಕೇಂದ್ರದ ಗಮನ ಸೆಳೆಯಲು ವಾಟಾಳ್ ನಾಗರಾಜ್ ಒಬ್ಬರೇ ಸಮರ್ಥರು.
ಜಾತ್ಯಾತೀತ ವ್ಯಕ್ತಿ ವಾಟಾಳ್ ನಾಗರಾಜ್, ಕನ್ನಡ ಕಟ್ಟಾಳು ವಾಟಾಳ್ ನಾಗರಾಜ್.
ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೋರಾಡಲು ಲೋಕಸಭೆಗೆ ವಾಟಾಳ್ ನಾಗರಾಜ್ ರವರನ್ನು ಆಯ್ಕೆ ಮಾಡಲೇಬೇಕು. ಹೀಗಾಗಿ ಏಪ್ರಿಲ್ 07ರ ಭಾನುವಾರ ಮಧ್ಯಾಹ್ನ 12:30 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಈಡುಗಾಯಿ ಒಡೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಡುಗಾಯಿ ಒಡೆಯುವ ಕಾರ್ಯಕ್ರಮ. pic.twitter.com/cbKJkHNLKD
— ಶ್ರೀ ವಾಟಾಳ್ ನಾಗರಾಜ್ (@VatalNagaraj) April 6, 2024