ಉಪ್ಪಿನಂಗಡಿ: ಚಿನ್ನಾಭರಣವಿದ್ದ ಪರ್ಸ್ ಮರಳಿಸಿದ ಅರ್ಚಕ
ಉಪ್ಪಿನಂಗಡಿ: ಮೂರು ಪವನ್ ತೂಕದ ಚಿನ್ನಾಭರಣವಿದ್ದ ಪರ್ಸ್‌ವೊಂದನ್ನು ಮಹಿಳಾ ಭಕ್ತರೊಬ್ಬರು ಕಳೆದುಕೊಂಡಿದ್ದು, ಅದು ಸಿಕ್ಕಿದ ದೇಗುಲದ ಸಹಾಯಕ ಅರ್ಚಕರು, ಮಹಿಳಾ ಭಕ್ತರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಜುಳಾ ಅವರು ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುಗುವ ವೇಳೆ ತನ್ನ ಆಭರಣವನ್ನಿರಿಸಿದ್ದ ಪರ್ಸನ್ನು ಕಳೆದುಕೊಂಡಿದ್ದರು. ಭಾರೀ ಜನಸಂದಣಿ ಇದ್ದ ಆ ಸಮಯದಲ್ಲಿ ಪರ್ಸ್ ಕಳೆದುಕೊಂಡಿರುವುದು ಗೊತ್ತಾಗಿರಲಿಲ್ಲ. ಮನೆಗೆ ಬಂದಾಗ ವಿಷಯ ತಿಳಿದುಬಂದಿತ್ತು. ಅನಂತರ ದೇಗುಲಕ್ಕೆ ತೆರಳಿ ಹುಡುಕಾಟ ನಡೆಸಿದರೂ ಪರ್ಸ್ ಪತ್ತೆಯಾಗಿರಲಿಲ್ಲ.
ಅನಂತರ ಅಲ್ಲೇ ಇದ್ದ ದೇವಾಲಯದ ಸಹಾಯಕ ಅರ್ಚಕ ಅನಂತಕೃಷ್ಣ ಅವರು ಮಹಿಳೆಯನ್ನು ವಿಚಾರಿಸಿ, ದೇಗುಲದಲ್ಲಿ ಭಕ್ತರು ಸಮರ್ಪಿಸುವ ಎಳ್ಳೆಣ್ಣೆಯ ಬಳಿ ಸಣ್ಣ ಪರ್ಸ್ ಸಿಕ್ಕಿರುವುದಾಗಿ ಅವರಿಗೆ ತಿಳಿಸಿ, ಅದನ್ನು ಅವರಿಗೆ ನೀಡಿದ್ದಾರೆ. ಪರ್ಸ್‌ನೊಳಗೆ 3 ಪವನ್ ತೂಕದ ಚಿನ್ನಾಭರಣ ಯಥಾಸ್ಥಿತಿಯಲ್ಲಿತ್ತು.
Padubidri ಪಣಿಯೂರಲ್ಲಿ ಮನೆಗಳ್ಳತನ ; 5 ಲ. ರೂ. ಮೌಲ್ಯದ ಚಿನ್ನಾಭರಣ ಕಳವು
ಪಡುಬಿದ್ರಿ: ಎಲ್ಲೂರು ಗ್ರಾಮದ ಪಣಿಯೂರು, ಕರಂಬಾರ್ ದರ್ಕಾಸ್ತು ಮನೆಯ ಎದುರಿನ ಬೀಗ ಮುರಿದು ಬುಧವಾರ ಮಧ್ಯಾಹ್ನದಿಂದ ಸಂಜೆಯ ನಡುವೆ ಒಳ ಪ್ರವೇಶಿಸಿರುವ ಕಳ್ಳರು, ಮನೆಯಲ್ಲಿನ ಕಪಾಟುಗಳನ್ನು ಜಾಲಾಡಿ, ಸುಮಾರು 5 ಲಕ್ಷ ರೂ. ಮೌಲ್ಯದ ಸುಮಾರು 100 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಪ್ರಕರಣವು ದಾಖಲಾಗಿದೆ.
ಮನೆ ಯಜಮಾನ ಜಯರಾಮ ಮೂಲ್ಯ ಎಂಆರ್‌ಪಿಎಲ್‌ನಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದು ಬೆಳಗ್ಗೆ 7ಕ್ಕೆ ಕೆಲಸಕ್ಕೆ ಹೋಗಿದ್ದರು. ಅವರ ತಾಯಿಯೂ ಮಧ್ಯಾಹ್ನ ಕಂಚಿನಡ್ಕದ ಸೊಸೆಯ ಮನೆಗೆ ಹೋಗಿದ್ದರು. ಜಯರಾಮ ಮೂಲ್ಯರ ಇಬ್ಬರು ಮಕ್ಕಳೂ ಶಾಲೆಗೆ ಹೋಗಿದ್ದರು. ಸಂಜೆಯ ವೇಳೆಗೆ ಮಗ ಕೌಶಿಕ್ ಮನೆಗೆ ಬಂದಾಗ ಮನೆಯ ಬೀಗ ಮುರಿದಿರುವುದು ಕಂಡುಬಂದು ತಂದೆಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದರು.
ಆ ಕೂಡಲೇ ಹೊರಟು ಪತ್ನಿ ಜತೆಗೇ ಬಂದಿದ್ದ ಜಯರಾಮ ಮೂಲ್ಯರು ಮನೆಯೊಳಕ್ಕೆ ಹೋಗಿ ನೋಡಿದಾಗ ಕಳ್ಳರು ಮೂರು ಕಪಾಟುಗಳನ್ನು ಜಾಲಾ ಡಿದ್ದು ಒಂದು ಕಪಾಟಿನ ಬೀಗ ಮುರಿದು ಅದರಲ್ಲಿರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದು ತಿಳಿಯಿತು.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ, ವಿಶೇಷ ತಂಡವೊಂದರ ಜತೆಗೆ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಿಎಸ್‌ಐ ಪ್ರಸನ್ನ, ಕ್ರೈಂ ಎಸ್‌ಐ ಸುದರ್ಶನ ದೊಡ್ಡಮನಿ ಭೇಟಿ ನೀಡಿದ್ದು ತನಿಖೆಯು ಮುಂದುವರಿದಿದೆ.