ಉಳ್ಳಾಲ: ಸೋಮೇಶ್ವರ ಬಳಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು!
ದಕ್ಷಿಣ ಕನ್ನಡ, ಡಿ.09: ಸಮುದ್ರತೀರದಲ್ಲಿ ಆಟವಾಡುವ ಸಂದರ್ಭ ಅಪ್ಪಳಿಸಿದ ಅಲೆಗಳ ನಡುವೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲಾದ ಘಟನೆ ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಉಳ್ಳಾಲ ತಾಲೂಕಿನ ಸೋಮೇಶ್ವರದಲ್ಲಿ ನಡೆದಿದೆ. ಸೋಮೇಶ್ವರ ಪರಿಜ್ಞಾನ ದ್ವಿತೀಯ ಪಿಯುಸಿ ಕಾಲೇಜಿನ ಯಶ್ವಿತ್ ಹಾಗೂ ಯುವರಾಜ್ ಮೃತ ವಿದ್ಯಾರ್ಥಿಗಳು. ಇನ್ನು ಇವರ ಮೃತ ದೇಹಕ್ಕಾಗಿ ಸ್ಥಳೀಯ ಈಜುಗಾರರು, ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. ಇನ್ನು ಘಟನೆ ಹಿನ್ನಲೆ ಸೋಮೇಶ್ವರ ಸಮುದ್ರ ತೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಜಲು ತೆರಳದಂತೆ ಉಳ್ಳಾಲ ಠಾಣಾಧಿಕಾರಿ ಹೆಚ್. ಎನ್ ಬಾಲಕೃಷ್ಣ ಸೂಚಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಡಿ.03 ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಐವರು ಸ್ನೇಹಿತರ ಪೈಕಿ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಕಲಬುರಗಿ ಮೂಲದ ಆಕಾಶ ಮತ್ತು ಅಭಿಷೇಕ್ ಎಂಬುವವರು ಕೊನೆಯುಸಿರೆಳೆದಿದ್ದರು. ಬೀಚ್ನಲ್ಲಿ ಯಾಂತ್ರಿಕ ಬೋಟ್ ಓಡಿಸುತ್ತಿರುವಾಗ ಅಲೆಗಳ ಜೋರಾದ ರಭಸಕ್ಕೆ ಸಿಲುಕಿ ಈ ದುರ್ಘಟನೆ ನಡೆದಿತ್ತು.
ಈ ಕುರಿತು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ ಐವರು ಪ್ರವಾಸಿಗರು ಸಮುದ್ರದಲ್ಲಿ ಈಜಾಡಲು ಹೋದಾಗ ಅಲೆಗಳ ಹೊಡೆತಕ್ಕೆ ಸಿಲುಕಿದ್ದರು. ಇದನ್ನು ಕಂಡು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಈ ಘಟನೆ ಮರೆಮಾಚುವ ಮುನ್ನವೇ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಕೊನೆಯುಸಿರೆಳೆದಿದ್ದಾರೆ.
ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಬಡವರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ ಕಂಪನಿ
ಮಂಗಳೂರು, ಡಿಸೆಂಬರ್ 09: ಅದು ದೇಶದಲ್ಲಿ ಸುಮಾರು 85 ಶಾಖೆ ಹೊಂದಿರುವ ಕೇರಳ (Kerala) ಮೂಲದ ಫೈನಾನ್ಸ್ (Finance) ಕಂಪನಿ. ಸದ್ಯ ಕೆಲ ದಿನಗಳಿಂದ ಕಂಪನಿ ಬಾಗಿಲು ಮುಚ್ಚಿದ್ದು, ಬಡವರು ಫೈನಾನ್ಸ್ ಬಾಗಿಲು ಕಾಯುತ್ತಿದ್ದಾರೆ. ಕೂಲಿ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ಆ ಫೈನಾನ್ಸ್ ನಂಬಿ ಕೈ ಸುಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಆ ಫೈನಾನ್ಸ್ ಕಂಪನಿ ಯಾವುದು? ಏನಿದು ಸ್ಟೋರಿ? ಇಲ್ಲಿದೆ ಓದಿ…
ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕೂಲಿ ನಾಲಿ ಮಾಡಿ ಅದೆಷ್ಟೊ ಜನರು ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಕಡಿಮೆ ಸಂಪಾದನೆಯಲ್ಲೂ ಒಂದಷ್ಟು ಹಣ ಉಳಿಸಬೇಕು, ಜೊತೆಗೆ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ರಾಷ್ಟ್ರಿಕೃತ ಬ್ಯಾಂಕ್ ಬಿಟ್ಟು ಫೈನಾನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಆದರೆ ಸದ್ಯ ಇವರಿಗೆ ಬಡ್ಡಿ ಸಿಗುವುದಿರಲಿ ಹೂಡಿರುವ ಅಸಲಿ ಹಣ ಸಿಗುವು ಡೌಟ್ ಆಗಿದೆ. ಏಕೆಂದರೆ ಇವರು ಹೂಡಿಕೆ ಮಾಡಿರುವ ರಾಯಲ್ ಟ್ರಾವಂಕೂರ್ ಎಂಬುವ ಫೈನಾನ್ಸ್ ಕಂಪೆನಿ ಸದ್ದಿಲ್ಲದೆ ಮುಚ್ಚಿದೆ.
ಹೌದು ರಾಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಫೈನಾನ್ಸ್ ಕಂಪನಿ ಸದ್ಯ ಮಂಗಳೂರಿನ ಒಂದು ಬ್ರ್ಯಾಂಚ್ನಲ್ಲೇ ಸರಿ ಸುಮಾರು 65 ಲಕ್ಷ ರೂ. ವಂಚನೆ ಮಾಡಿದೆ. ಕೇರಳ ಮೂಲದ ಈ ಫೈನಾನ್ಸ್ ಕಂಪನಿ ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದು ಜನರಿಗೆ ನಂಬಿಸಿತ್ತು. ಹೀಗಾಗಿ ಕೂಲಿ ಕಾರ್ಮಿಕರು ಹೆಚ್ಚಾಗಿ ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಈಗ ಕೈ ಸುಟ್ಟುಕೊಂಡಿದ್ದಾರೆ.
ರಾಯಲ್ ಟ್ರವಾಂಕೂರ್ ಫೈನಾನ್ಸ್ ಕಂಪನಿ ದೇಶದ ಎಲ್ಲೆಡೆ ಸುಮಾರು 85 ಬ್ರ್ಯಾಂಚ್ಗಳನ್ನು ಹೊಂದಿದೆ. ಕರ್ನಾಟಕದ ಹಲವೆಡೆ ಈ ಫೈನಾನ್ಸ್ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿದೆ. ಸದ್ಯ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಈ ಫೈನಾನ್ಸ್ ಕಂಪನಿ ತನ್ನ ಕಚೇರಿಯನ್ನು ಬಂದ್ ಮಾಡಿದ್ದು ಸಿಬ್ಬಂದಿಗಳೂ ಸದ್ದಿಲ್ಲದೆ ಪರಾರಿಯಾಗಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಹಾಗೂ ಒಂದಿಷ್ಟು ಅಂಗಡಿಯವರು ಈ ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ.
ಆದರೆ ಇದೀಗ ಕಂಪನಿ ಬಾಗಿಲು ಮುಂಚಿಕೊಂಡು ಹೋಗಿದ್ದು, ಫೈನಾನ್ಸ್ ಕಂಪೆನಿ ಆರಂಭಿಸಲು ಪರವಾನಿಗೆ ನೀಡಿರುವ ಸರ್ಕಾರವೇ ತಮ್ಮ ಹಣ ವಾಪಾಸು ನೀಡಲಿ ಅಂತ ಬೇಡಿಕೆ ಇಟ್ಟಿದ್ದಾರೆ.
ತಮಗಾದ ವಂಚನೆ ಬಗ್ಗೆ ಜನರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಆರಂಭದಲ್ಲಿ ಹಣ ನೀಡುವುದಾಗಿ ಹೇಳಿದ ಸಿಬ್ಬಂಧಿಗಳು ಇದೀಗ ಏಕಾ ಏಕಿ ಬಾಗಿಲು ಹಾಕಿ ಪರಾರಿಯಾಗಿದ್ದಾರೆ. ಒಟ್ಟಾರೆ ಅಧಿಕ ಬಡ್ಡಿ ನಂಬಿ ಕಷ್ಟದ ಹಣವನ್ನು ಹೂಡಿಕೆ ಮಾಡಿದ ಜನರು ಮಾತ್ರ ಈಗ ನ್ಯಾಯಕ್ಕಾಗಿ ಸರ್ಕಾರದ ಬಾಗಿಲು ತಟ್ಟುತ್ತಿದ್ದಾರೆ.