ಉಳ್ಳಾಲ: ಚೂರಿ ಇರಿದು ಯುವಕನ ಹತ್ಯೆ.!
ಉಳ್ಳಾಲ: ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತಕಾಲನಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ಸಾರಸ್ವತ ಕಾಲನಿ ನಿವಾಸಿ ವರುಣ್ (28) ಹತ್ಯೆಯಾದವರು. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ ಐದು ಮಂದಿಯ ನಡುವೆ ವಾಗ್ವಾದ ನಡೆದು ಸೂರಜ್ , ವರುಣ್ ಹೃದಯಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆ ನಡೆಸಿದ್ದಾನೆ.
ಹಳೇ ವೈಷಮ್ಯದಿಂದ ಕೃತ್ಯ ನಡೆದಿರುವ ಸಾಧ್ಯತೆಗಳಿದ್ದು, ಸೋಮೇಶ್ವರ ಪುರಸಭೆಗೆ ಡಿ. 27 ಕ್ಕೆ ಚುನಾವಣೆಯೂ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೆಲವೇ ದಿನಗಳು ಬಾಕಿಯಿದೆ. ಈ ಸಂಬಂಧವೂ ಗಲಾಟೆ ನಡೆದಿರುವ ಸಾಧ್ಯತೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಸೋಮೇಶ್ವರ ಗ್ರಾ.ಪಂ ಮಾಜಿ ಸದಸ್ಯ ರವಿರಾಜ್ ಎಂಬವರಿಗೂ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಉದ್ಯಾವರ ಸೇತುವೆಯಿಂದ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಉಡುಪಿ, ಡಿ 14: ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಉದ್ಯಾವರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ನಗರದ ಕೋರ್ಟ್ ಬಳಿಯ ನಿವಾಸಿ ರವೀಂದ್ರ ಭಟ್(55) ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪಾರ್ಸೆಲ್ ತೆಗೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದವರು ಮನೆಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು. ಅಲ್ಲಿಂದ ತನ್ನ ಸ್ಕೂಟರ್‌ನಲ್ಲಿ ಉದ್ಯಾವರ ಸೇತುವೆ ಬಳಿ ತೆರಳಿದ ಅವರು, ಸೇತುವೆಯಲ್ಲಿಯೇ ಸ್ಕೂಟರ್ ನಿಲ್ಲಿಸಿ, ಮೇಲಿಂದ ಹೊಳೆಗೆ ಹಾರಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ದೋಣಿ ಮೂಲಕ ಹುಡುಕಾಟ ನಡೆಸಿದರು. ಸಂಜೆ ವೇಳೆ ಅವರ ಮೃತದೇಹವು ಅಂಕುದ್ರು ಬಳಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇವರು ಕಳೆದ 10 ವರ್ಷಗಳಿಂದ ಉಡುಪಿಯ ಪೈ ಇಂಟರ್‌ನ್ಯಾಶನಲ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.