Ujwala Vemuru: ಭಾರತ ಮೂಲದ ವೈದ್ಯೆ ಆಸ್ಟ್ರೇಲಿಯಾದಲ್ಲಿ ಜಲಪಾತಕ್ಕೆ ಬಿದ್ದು ದಾರುಣ ಸಾವು..!
ಸಿಡ್ನಿ : ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಯುವ ವೈದ್ಯೇಯೋರ್ವರು ಜಲಪಾತಕ್ಕೆ ಬಿದ್ದು ಮೃತಪಟ್ಟ ದಾರುಣ ಘಟನೆ ವರದಿಯಾಗಿದ್ದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಉಜ್ವಲಾ ವೇಮುರು (23) ಮೃತ ಯುವ ವೈದ್ಯೆಯಾಗಿದ್ದಾರೆ.
ಗೋಲ್ಡ್ ಕೋಸ್ಟ್ನ ಲ್ಯಾಮಿಂಗ್ಟನ್ ರಾಷ್ಟ್ರೀಯ ಉದ್ಯಾನವನದ ಯಾನ್ ಬಕುಚಿ ಜಲಪಾತಕ್ಕೆ ಬಿದ್ದು ಉಜ್ವಲಾ ಅವರು ದಾರುಣ ಅಂತ್ಯ ಕಂಡಿದ್ದು ಶನಿವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಉಜ್ವಲಾ ತನ್ನ ಸ್ನೇಹಿತರೊಂದಿಗೆ ಚಾರಣಕ್ಕಾಗಿ ಸ್ಥಳಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಡೆದುಕೊಂಡು ಹೋಗುವಾಗ ಇಳಿಜಾರಿನಲ್ಲಿ ಬಿದ್ದ ಟ್ರೈಪಾಡ್ ಅನ್ನು ಎತ್ತಿಕೊಳ್ಳಲು ಪ್ರಯತ್ನಿಸುವಾಗ ಮಹಿಳೆ ಕಾಲು ಜಾರಿ 20 ಮೀಟರ್ ಆಳದ ಜಲಪಾತಕ್ಕೆ ಬಿದ್ದಿದ್ದಾರೆ.
ಅವರ ಸ್ನೇಹಿತರು ಮಾಹಿತಿ ನೀಡಿದ ನಂತರ, ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು ಮತ್ತು ಆರು ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಶವವನ್ನು ಹೊರತೆಗೆಯಲಾಯಿತು. ಘಟನೆಯ ಬಗ್ಗೆ ಪೊಲೀಸರು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅಪಘಾತದ ನಂತರ ಜಲಪಾತವನ್ನು ನೋಡಲು ಸ್ಥಳಕ್ಕೆ ಬರುವವರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚನೆ ನೀಡಿದ್ದಾರೆ. ಉಜ್ವಲಾ ಅವರ ಕುಟುಂಬವು ಆಸ್ಟ್ರೇಲಿಯಾದ ಪೌರತ್ವ ಹೊಂದಿದ್ದಾರೆ. 2023 ರಲ್ಲಿ, ಉಜ್ವಲಾ ಗೋಲ್ಡ್ ಕೋಸ್ಟ್ ಬಾಂಡ್ ವಿಶ್ವವಿದ್ಯಾಲಯದಿಂದ ವೈದ್ಯಕೀಯದಲ್ಲಿ ಪದವಿ ಪಡೆದರು.