ಉಡುಪಿ ನಾಲ್ವರ ಹತ್ಯೆ ಪ್ರಕರಣ : ಆರೋಪಿ ಸ್ಥಳ ಮಹಜರು ವೇಳೆ ಭುಗಿಲೆದ್ದ ಆಕ್ರೋಶ: ಲಾಠಿ ಚಾರ್ಜ್
Udupi ಉಡುಪಿ : ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ನೇಜಾರಿನ ತೃಪ್ತಿ ನಗರ ದಲ್ಲಿ (Udupi) ಸ್ಥಳ ಮಹಜರಿಗೆ ಗುರುವಾರ ಮಧ್ಯಾಹ್ನ ಕರೆ ತಂದಾಗ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಹತ್ಯೆ ನಡೆದ ಮನೆಗೆ ಬಂಧಿತ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಚೌಗಲೆ (39)ಯನ್ನು ಪೊಲೀಸರು ಸ್ಥಳ ಮಹಜರಿಗೆ ಬಿಗಿ ಭದ್ರತೆಯ ನಡುವೆ ಕರೆತಂದಿದ್ದಾರೆ. ಈ ವೇಳೆ ಜಮಾಯಿಸಿದ್ದ ಸ್ಥಳೀಯರು ಆಕ್ರೋಶ ಹೊರ ಹಾಕಿ, ಆರೋಪಿಯನ್ನು ನಮಗೊಪ್ಪಿಸಿ ಎಂದು ಘೋಷಣೆ ಕೂಗಿದ್ದಾರೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ.
ಘಟನೆ ಬೆನ್ನಲ್ಲೇ ಆ ಭಾಗದಲ್ಲಿ ರಸ್ತೆ ತಡೆ ಮಾಡಲಾಯಿತು. ಕೆಲ ಕಾಲ ಟ್ರಾಫಿಕ್ ದಟ್ಟನೆ ಉಂಟಾಯಿತು.ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನೂ ಕೂಡಲೇ ಕರೆಸಿಕೊಳ್ಳಲಾಗಿದೆ.
ಸ್ಥಳಕ್ಕೆ ಎಸ್ ಪಿ, ಡಿ ಸಿ ಬರಬೇಕು ಎಂದು ಆಗ್ರಹಿಸಿ ರಸ್ತೆ ತಡೆ ಮಾಡಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಧಿಕ್ಕಾರವನ್ನೂ ಕೂಗಿದರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜನಾಕ್ರೋಶದ ನಡುವೆಯೇ ಸ್ಥಳ ಮಹಜರು ಮುಗಿಸಿ ಆರೋಪಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಬುಧವಾರ ಪ್ರವೀಣ್ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ನ್ಯಾಯಾಲಯ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.