ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!
Twitter
Facebook
LinkedIn
WhatsApp
ಉಡುಪಿ : ನಾಡನ್ನೇ ತಲ್ಲಣಗೊಳಿಸಿದ್ದ ಉಡುಪಿ ನೇಜಾರು ಹತ್ಯಾಕಾಂಡದ ಆರೋಪಿ ಪ್ರವೀಣ್ ಚೌಗುಲೆ ಅವರು ತನ್ನ ಮೇಲಿನ ಆರೋಪವನ್ನು ನ್ಯಾಯಾಲಯದಲ್ಲಿ ನಿರಾಕರಿಸಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಈ ವೇಳೆ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಆರೋಪಿ ಮೇಲಿನ ಆಪಾದನೆಯನ್ನು ವಾಚಿಸಿದರು.
ಆದರೆ ಚೌಗುಲೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿ, ವಿಚಾರಣೆ ಎದುರಿಸುವುದಾಗಿ ತಿಳಿಸಿದನು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಗಂಭೀರ ಪ್ರಕರಣದ ವಿಚಾರಣೆಗೆ ಪೂರ್ವಭಾವಿಯಾಗಿ ಎ.5ರಂದು ಪ್ರಿ ಟ್ರಾಯಲ್ ಕಾನ್ಫರೆನ್ಸ್ ನಡೆಸಲು ಆದೇಶ ನೀಡಿದರು. ನ್ಯಾಯಾಧೀಶರ ಸಮಕ್ಷಮದಲ್ಲಿ ನಡೆಯುವ ಈ ಕಾನ್ಪರೆನ್ಸ್‌ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಪಿಪಿ, ಆರೋಪಿ ಪರ ವಕೀಲರು ಭಾಗವಹಿಸಿ, ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಯಾವ ವಿಚಾರಣೆ ಅಗತ್ಯ ಇದೆ ಎಂಬುದರ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಿ, ವಿಚಾರಣೆ ಆರಂಭಿಸಲು ಸಾಕ್ಷಿಗಳಿಗೆ ಸಮನ್ಸ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಬಳಿಕ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಎ.5ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.
ಈ ಸಂದರ್ಭದಲ್ಲಿ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್ ಆಳ್ವ ಹಾಜರಿದ್ದರು. ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಭದ್ರತೆ ಉಸ್ತುವಾರಿಯನ್ನು ಪ್ರಭು ಡಿ.ಟಿ. ವಹಿಸಿದ್ದರು. ಬಳಿಕ ಆರೋಪಿ ಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಜೈಲಿಗೆ ಕರೆದೊಯ್ಯಲಾಯಿತು.
2023ರ ನ.12ರಂದು ಆರೋಪಿ ಪ್ರವೀಣ್ ಚೌಗುಲೆ ನೇಜಾರು ತೃಪ್ತಿ ಲೇಔಟ್‌ನ ಹಸೀನಾ ಹಾಗೂ ಅವರ ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದನು. ಆತನನ್ನು ಪೊಲೀಸರು ನ.14ರಂದು ಬೆಳಗಾವಿ ಬಂಧಿಸಿದ್ದರು.
ನೇಜಾರು ಹತ್ಯಾಕಾಂಡದ ಆರೋಪಿ ಪ್ರವೀಣ್ ಚೌಗುಲೆ ಭದ್ರತೆ ಹೊಣೆ ಹೊತ್ತ ಎಸ್‌ಐ ಮದ್ಯಪಾನ ಮಾಡಿದ ಆರೋಪ, ಶಿಸ್ತು ಕ್ರಮಕ್ಕೆ ಎಸ್‌ಪಿ ಸೂಚನೆ..!
ಉಡುಪಿ : ಉಡುಪಿ ನೇಜಾರು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯ ಭದ್ರತೆ ಜವಾಬ್ದಾರಿ ವಹಿಸಿದ್ದ ಬೆಂಗಳೂರಿನ ರಿಸರ್ವ್ ಎಸ್ಸೈ ವಿರುದ್ಧ ಮದ್ಯಪಾನ ಸೇವಿಸಿ ಕರ್ತವ್ಯ ನಿರ್ವಹಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆರೋಪಿ ಚೌಗುಲೆಯನ್ನು ಬೆಂಗಳೂರು ಜೈಲಿನಿಂದ ಉಡುಪಿಗೆ ಕರೆ ತರುವಾಗ ಭದ್ರತೆ ಕರ್ತವ್ಯದಲ್ಲಿದ್ದ ಆರ್‌ಎಸ್ಸೈ ಮದ್ಯಪಾನ ಸೇವಿಸಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದರು. ಆರೋಪಿ ಪ್ರವೀಣ್ ಭದ್ರತೆಯ ಹೊಣೆ ಹೊತ್ತ ಎಸ್‌ಐ ವಿರುದ್ದ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಕೋರ್ಟ್ ಒಳಗೆ ಕೂಡ ಅನುಚಿತವಾಗಿ ವರ್ತಿಸುತ್ತಿರುವುದಾಗಿ ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಎಸ್ಪಿ ಯವರು ಆರ್‌ಎಸ್ಸೈ ವಿರುದ್ದ ಕ್ರಮಕ್ಕೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.