ಉಡುಪಿ : ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ರಿಕ್ಷಾ ಚಾಲಕನಿಗೆ ಹೃದಯಾಘಾತ; ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಆಟೋ...!
ಉಡುಪಿ : ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ರಿಕ್ಷಾ ಚಾಲಕನಿಗೆ ಹೃದಯಾಘಾತವಾಗಿದ್ದು, ನಿಯಂತ್ರಣ ತಪ್ಪಿದ ರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಘಟನೆ ಜನವರಿ 4ರಂದು ಅಜ್ಜರಕಾಡು ಸಮೀಪ ನಡೆದಿದೆ. ಹೃದಯಾಘಾತಕ್ಕೀಡಾದ ರಿಕ್ಷಾ ಚಾಲಕ ಕಾಡಬೆಟ್ಟು ನಿವಾಸಿ ಸುರೇಶ್ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಜ್ಜರಕಾಡು ಕಡೆಯಿಂದ ನಗರದ ಬಸ್ ನಿಲ್ದಾಣಕ್ಕೆ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದು ಕೊಂಡು ಹೋಗುತ್ತಿದ್ದಾಗ ಚಾಲಕ ಹಠಾತ್ ಕುಸಿದು ಬಿದ್ದರೆನ್ನಲಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ರಿಕ್ಷಾ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೋಳೂರು ವಾರ್ಡ್ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ – ಸ್ಥಿತಿ ಗಂಭೀರ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಬೋಳೂರು ವಾರ್ಡ್ನ ಬಿಜೆಪಿ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಅವರು ಕಾರಿನೊಳಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ದಾಖಲಾಗಿದ್ದಾರೆ.
ಜಗದೀಶ್ ಶೆಟ್ಟಿ ಅವರು ಬೆಳಗ್ಗಿನಿಂದಲೇ ಯಾರ ಮೊಬೈಲ್ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಸಂಶಯಗೊಂಡ ಮನೆಯವರು ಜನಪ್ರತಿನಿಧಿಗಳಿಗೆ ತಿಳಿಸಿದ್ದು, ಬಳಿಕ ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಹುಡುಕಿದಾಗ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ಲೊಕೇಶನ್ ಕಂಡುಬಂದಿದೆ. ತಕ್ಷಣ ಅಲ್ಲಿಗೆ ತೆರಳಿದಾಗ ಕಾರಿನೊಳಗೆ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದರು.
ಅಕ್ಕಪಕ್ಕದವರಿಗೆ ವಿಷಯ ತಿಳಿದು ಕಾರಿನ ಗಾಜನ್ನು ಒಡೆದು ಜಗದೀಶ್ ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಸೇರಿಸುವ ವೇಳೆಗೆ ವಿಷ ಸೇವನೆ ಮಾಡಿ 2-3 ಗಂಟೆ ಆಗಿರಬಹುದು ಎಂದು ತಿಳಿದು ಬಂದಿದೆ. ಆರೋಗ್ಯ ಸ್ಥಿತಿ ತುಸು ಗಂಭೀರವಾಗಿದ್ದರೂ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಇತರ ಜನಪ್ರತಿನಿಧಿಗಳು, ಮುಖಂಡರು ಭೇಟಿ ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.