ಉಡುಪಿ :ಅಜ್ಜ ಕೇಳಿದ್ದನ್ನು ಕೊಟ್ಟಿದ್ದಾರೆ ಎಂದು ಕೊರಗಜ್ಜನಿಗೆ 1002 ಬಾಟಲಿ ಮದ್ಯ ಅರ್ಪಿಸಿದ ಭಕ್ತ!
ಉಡುಪಿ: ತುಳುನಾಡಿನಲ್ಲಿ ಕೊರಗಜ್ಜ (Swamy koragajja) ಎಂದರೆ ಎಲ್ಲರ ಪ್ರೀತಿಯ ದೈವ. ಯಾರೇ ಕಷ್ಟದಲ್ಲಿದ್ದರೂ, ನೋವಿನಲ್ಲಿದ್ದರೂ, ದಿಕ್ಕೆಟ್ಟು ನಿಂತರೂ ಒಂದೇ ಭಕ್ತಿಯ ಮನವಿಗೆ ಓಗೊಡುವ ಶಕ್ತಿ ಎನ್ನುವುದು ಜನರ ನಂಬಿಕೆ. ಅಂಥ ಕೊರಗಜ್ಜನಿಗೆ ಭಕ್ತರೊಬ್ಬರು 1002 ಬಾಟಲಿ ಮದ್ಯ (1002 Bottles of Alcohol) ಅರ್ಪಿಸಿದ್ದಾರೆ. ಅಜ್ಜ ಕೇಳಿದ್ದನ್ನು ಕೊಟ್ಟಿದ್ದಾರೆ ಎಂದು ಪ್ರೀತಿಯಿಂದ ಹರಕೆ ತೀರಿಸಿದ್ದಾರೆ ಆ ಭಕ್ತ (Offering by devotee).
ಕೊರಗಜ್ಜನಿಗೆ ಮದ್ಯ ಸಮಾರಾಧನೆ ಹೊಸತಲ್ಲ. ತಾವು ಅಂದುಕೊಂಡಿದ್ದನ್ನು ಈಡೇರಿಸಿದಾಗ, ಕಳೆದುಕೊಂಡಿದ್ದು ಸಿಕ್ಕಿದಾಗ ಜನರು ಭಕ್ತಿಯ ಸಮರ್ಪಣೆ ಮಾಡುವುದು ಇಲ್ಲಿನ ವಾಡಿಕೆ. ಅಜ್ಜನಿಗೆ ಮದ್ಯ, ಚಕ್ಕುಲಿ ಮತ್ತು ಎಲೆ ಅಡಿಕೆ ಬೀಡಾ ಅಂದರೆ ತುಂಬ ಇಷ್ಟ. ಸಾಮಾನ್ಯವಾಗಿ ಅಜ್ಜನಿಗೆ ಒಬ್ಬರು ಒಂದು ಬಾಟಲಿ ಮದ್ಯವನ್ನು ನೀಡುವುದು ವಾಡಿಕೆ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಮದ್ಯ ಒಪ್ಪಿಸಿರುವುದು ಇದೇ ಮೊದಲು.
ಅಂದ ಹಾಗೆ ಈ ಭಕ್ತಿಯ ಸಮರ್ಪಣೆ ನಡೆದಿರುವುದು ಉಡುಪಿ ಜಿಲ್ಲೆ ಕಟಪಾಡಿ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿಯಲ್ಲಿ. ಇಲ್ಲಿ ಬಂದು ಹರಕೆ ಹೊತ್ತವರಿಗೆ ಒಳ್ಳೆಯದಾಗಿದೆ, ಅಭೀಷ್ಟಗಳು ಈಡೇರಿವೆ ಎನ್ನುವ ನಂಬಿಕೆ ಬಲವಾಗಿದೆ.
ಈ ಪ್ರಕರಣದಲ್ಲಿ 1002 ಬಾಟಲಿ ಮದ್ಯ ಸಮರ್ಪಣೆ ಮಾಡಿದವರು ಉಡುಪಿಯ ಜಿಲ್ಲೆಯ ಸಾಲಿಗ್ರಾಮದ ರವಿಚಂದ್ರ ಅವರು. ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಬಂದು ಈ ಸೇವೆ ನೀಡಿದ್ದಾರೆ.
ರವಿಚಂದ್ರ ದಂಪತಿಗೆ ಮದುವೆಯಾಗಿ ಹಲವು ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ಹೀಗಾಗಿ ಯಾರದೋ ಸಲಹೆಯಂತೆ ಅವರು ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವಸ್ಥಾನಕ್ಕೆ ಬಂದು ಕೊರಗಜ್ಜ ಗುಡಿಯ ಮುಂದೆ ಸಂತಾನ ಪ್ರಾಪ್ತಿಗಾಗಿ ಕಣ್ಣೀರಿನ ಮನವಿ ಸಲ್ಲಿಸಿದ್ದರು. ಮಕ್ಕಳಾದರೆ 1002 ಬಾಟಲಿ ಮದ್ಯ ಒಪ್ಪಿಸುವುದಾಗಿ ದಂಪತಿ ಹರಕೆ ಹೊತ್ತುಕೊಂಡಿದ್ದರು.
ಇದೆಲ್ಲವೂ ಆಗಿ ಒಂದು ವರ್ಷವೇ ಕಳೆದಿದೆ. ರವಿಚಂದ್ರ ದಂಪತಿ ಬದುಕಿನಲ್ಲಿ ಈಗೊಂದು ಪುಟ್ಟ ಮಗು ಬಂದಿದೆ. ಕೊರಗಜ್ಜ ಕೊಟ್ಟ ಭಿಕ್ಷೆ ಇದು ಎಂದು ಅವರು ನಂಬಿದ್ದಾರೆ. ಮಗು ಹುಟ್ಟಿದ ಕೂಡಲೇ ಹರಕೆ ತೀರಿಸಬೇಕು ಎಂದು ರವಿಚಂದ್ರ ದಂಪತಿ ಬಯಸಿದ್ದರು. ಆದರೆ, ಇದ್ದ ಹಣ ಖರ್ಚಾಗಿತ್ತು. ಹೀಗಾಗಿ ಹೊಸದಾಗಿ ಹಣ ಹೊಂದಾಣಿಕೆ ಮಾಡಲು ಸ್ವಲ್ಪ ಸಮಯ ಹಿಡಿಯಿತಂತೆ. ಇದೆಲ್ಲವೂ ಕೊರಗಜ್ಜನಿಗೆ ಗೊತ್ತಾಗುತ್ತದೆ ಎನ್ನುವುದು ಅವರ ನಂಬಿಕೆ.
ಅವರೀಗ ಕುಟುಂಬ ಸಮೇತರಾಗಿ ಬಂದು 1002 ಮದ್ಯದ ಬಾಟಲಿಗಳನ್ನು ತಂದು ಹರಕೆ ಕಟ್ಟೆ ಮುಂದೆ ಜೋಡಿಸಿ ನಮಿಸಿದ್ದಾರೆ. ಅಂದ ಹಾಗೆ ಈ ಕೊರಗಜ್ಜ ಸನ್ನಿಧಿಯಲ್ಲಿ ಇಷ್ಟೊಂದು ಪ್ರಮಾಣದ ಮದ್ಯದ ಹರಕೆ ಸಂದಾಯವಾಗಿರಲಿಲ್ಲವಂತೆ.
ಇಷ್ಟೊಂದು ಮದ್ಯ ಏನು ಮಾಡುತ್ತಾರೆ?
ಕೊರಗಜ್ಜನಿಗೆ ಸಾಮಾನ್ಯವಾಗಿ ಶೇಂದಿ (ಕಳ್ಳು), ಬೀಡಾ, ಚಕ್ಕುಲಿ, ಮದ್ಯವನ್ನು ಹರಕೆಯಾಗಿ ನೀಡಲಾಗುತ್ತದೆ. ಸಾಮಾನ್ಯವಾಗಿ ಇದು ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಹೀಗಾಗಿ ಬಂದ ಹರಕೆಯನ್ನು ಮದ್ಯ ಕುಡಿಯುವ ಅಭ್ಯಾಸವಿರುವ ಭಕ್ತರಿಗೆ ನೀಡಲಾಗುತ್ತದೆ. ಇದನ್ನು ಜನರು ಭಕ್ತಿಯಿಂದ ಸ್ವೀಕರಿಸಿ ದೇವರ ಪ್ರಸಾದ ಎಂದು ನಂಬುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ಬಾಟಲಿಗಳು ಬಂದಿರುವುದರಿಂದ ಅದನ್ನು ಏನು ಮಾಡಬೇಕು ಎನ್ನುವ ತೀರ್ಮಾನ ಆಗಿಲ್ಲ ಎನ್ನಲಾಗುತ್ತಿದೆ.
ಕರಾವಳಿಯ ಕೊರಗಜ್ಜನಿಗೆ ದೇಶಾದ್ಯಂತ ಭಕ್ತರು
ಕರಾವಳಿಯಲ್ಲಿ ಹಲವಾರು ಕೊರಗಜ್ಜ ಸಾನಿಧ್ಯಗಳಿದ್ದು, ಪ್ರತಿಯೊಂದು ಗುಡಿಯೂ ತನ್ನದೇ ಆದ ಪವಾಡ ಸದೃಶ ನಂಬಿಕೆಗಳಿಂದ ಜನಪ್ರಿಯತೆ ಪಡೆದಿವೆ. ಒಂದು ಕಾಲದಲ್ಲಿ ಮಾರ್ಗದ ಬದಿಯಲ್ಲಿ ಕೇವಲ ಪುಟ್ಟ ಗುಡಿಗಳಾಗಿ ನೆಲೆಗೊಂಡಿದ್ದ ಕೊರಗಜ್ಜ ಸ್ಥಾನಗಳು ಈಗ ಎಲ್ಲರ ಮನಸಿಗೆ ಹತ್ತಿರವಾಗಿದ್ದು, ದೊಡ್ಡ ಕ್ಷೇತ್ರಗಳಾಗಿ ಗಮನ ಸೆಳೆಯುತ್ತಿವೆ. ಕರಾವಳಿ ಮಾತ್ರವಲ್ಲ, ದೇಶದ, ರಾಜ್ಯದ ಹಲವು ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಚಿತ್ರನಟರು, ರಾಜಕಾರಣಿಗಳು ಕೂಡಾ ಈಗ ಕೊರಗಜ್ಜನ ಭಕ್ತರಾಗಿದ್ದಾರೆ.