ಉಡುಪಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಉದ್ಯಾವರ ಐಸಿವೈಎಂ ಅಧ್ಯಕ್ಷ ಜೋಯಿಸ್ಟನ್ ಕ್ಯಾಸ್ಟಲಿನೋ ಸಾವು..!
ಕೋಟೇಶ್ವರ ಡಿಸೆಂಬರ್ 21:ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ಟಲಿನೋ ಎಂಬವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ(22) ಮೃತಪಟ್ಟವರು. ಇವರು ಉದ್ಯಾವರದ ಐಸಿವೈಎಂ ಅಧ್ಯಕ್ಷರಾಗಿದ್ದರು. ಕಾರಿನಲ್ಲಿದ್ದ ಲ್ಯಾಸ್ಟನ್ ಪಿಂಟೋ (22), ಜಸ್ಟಿನ್ ಕರ್ಡೊಜ (22), ವಿಲ್ಸನ್ ಮಾರ್ಟಿನ್ (23), ಗ್ಲಾಡ್ಸನ್ ಡಿಸಿಲ್ವಾ (23) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಉದ್ಯಾವರದ ವೈಸಿಎಂ ಘಟಕದ ಸದಸ್ಯರೆಂದು ತಿಳಿದು ಬಂದಿದೆ.
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.
ಮಂಗಳೂರು – ಬೈಕ್ ಗೆ ಡಿಕ್ಕಿ ಹೊಡೆದ ಮೀನು ಸಾಗಾಟದ ಲಾರಿ – ಬೈಕ್ ಸವಾರ ಬಲಿ
ಮಂಗಳೂರು ಡಿಸೆಂಬರ್ 21: ಬೈಕಿಗೆ ಮೀನು ಸಾಗಿಸುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರಿನಲ್ಲಿ ನಡೆದಿದೆ.
ಮೃತರನ್ನು ಸುರತ್ಕಲ್ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಅಬ್ದುಲ್ ರವೂಫ್ ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ, ಹಿಂದಿನಿಂದ ಬರುತ್ತಿದ್ದ ಮೀನಿನ ಲಾರಿ ಅತಿ ವೇಗದ ಚಾಲನೆಯಿಂದ ಬೈಕಿಗೆ ಡಿಕ್ಕಿಯಾಗಿದೆ. ಬೈಕಿನ ಮಿರರ್ ಗೆ ತಾಗಿದ್ದರಿಂದ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆ ಮತ್ತು ದೇಹದ ಮೇಲಿನಿಂದಲೇ ಲಾರಿಯ ಚಕ್ರ ಹರಿದು ಹೋಗಿದೆ. ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಸ್ಥಳದಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು ಕಂಕನಾಡಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತೆರವು ಮಾಡಿದ್ದಾರೆ.