ದಾವಣಗೆರೆ : ಲೋಕಸಭೆ ಚುನಾವಣೆಯಲ್ಲಿ 6 ನೇ ಬಾರಿ ಎರಡು ಕುಟುಂಬಗಳು ಮುಖಮುಖಿ!!
1977ರಲ್ಲಿ ಈ ಕ್ಷೇತ್ರಕ್ಕೆ ಮೊದಲ ಚುನಾವಣೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೊಂಡಜ್ಜಿ ಬಸಪ್ಪನವರು ಜಯಗಳಿಸಿ ಮೊದಲ ಸಂಸದರಾದರು. 1980ರಲ್ಲಿ ಕಾಂಗ್ರೆಸ್‌ನಿಂದ ಟಿ.ವಿ. ಚಂದ್ರಶೇಖರಪ್ಪ ಜಯಗಳಿಸಿ, ಜನತಾ ಪರಿವಾರದ ಅಭ್ಯರ್ಥಿಯಾಗಿದ್ದ ಕೊಂಡಜ್ಜಿ ಬಸಪ್ಪ ಸೋತರು. 1984, 1989 ಹಾಗೂ 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕುರುಬ ಸಮುದಾಯದ ಚೆನ್ನಯ್ಯ ಒಡೆಯರ್ ಗೆಲುವು ಸಾಧಿಸಿದರು.
1991ರ ಚುನಾವಣೆಯಲ್ಲಿಯೇ ಬಿಜೆಪಿ ದಾವಣಗೆರೆಯಲ್ಲಿ ಖಾತೆ ತೆರೆಯಬೇಕಿತ್ತು, ಅಷ್ಟು ಜಿದ್ದಾಜಿದ್ದಿನ ಕಣವಾಗಿತ್ತು. ಆದರೆ ಮರು ಎಣಿಕೆಯಲ್ಲಿ ಬಿಜೆಪಿ ಸೋತಿತು, ಚನ್ನಯ್ಯ ಒಡೆಯರ್ ಅತಿ ಕಡಿಮೆ ಅಂತರದಲ್ಲಿ ಎಸ್.ಎ. ರವೀಂದ್ರನಾಥ್ ವಿರುದ್ಧ ಜಯ ಗಳಿಸಿದ್ದರು. ಆದರೆ, ತಾಂತ್ರಿಕವಾಗಿ ಬಿಜೆಪಿಯೇ ಗೆದ್ದಿತ್ತು. ಕಾಂಗ್ರೆಸ್‌ನಿಂದ ಅನ್ಯಾಯ ಆಯಿತು ಎಂದು ಅಂದಿನ ಚುನಾವಣೆ ಬಗ್ಗೆ ಬಿಜೆಪಿ ನಾಯಕರು ಹೇಳುತ್ತಾರೆ.
ಎರಡು ಕುಟುಂಬದ ಸೆಣಸು!
1998ರಲ್ಲಿಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಕಣಕ್ಕಿಳಿದರು, ಬಿಜೆಪಿಯಿಂದ ಹಾಲಿ ಎಂಪಿಯಾಗಿದ್ದ ಜಿಎನ್ ಮಲ್ಲಿಕಾರ್ಜುನಪ್ಪ ಮತ್ತೆ ಅಖಾಡಕ್ಕೆ ಬಂದರು. ಈ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು, ಜಿಎನ್ ಮಲ್ಲಿಕಾರ್ಜುನಪ್ಪ ಅವರನ್ನು ಸೋಲಿಸಿ ಸಂಸತ್‌ಗೆ ತೆರಳಿದರು. ಈ ಚುನಾವಣೆಯಿಂದ ಎರಡೂ ಕುಟುಂಬಗಳ ನಡುವೆ ಆರಂಭವಾದ ಚುನಾವಣೆ ಸೆಣಸಾಟ ಇನ್ನೂ ನಿಂತಿಲ್ಲ.
ಮತ್ತೆ 1999ರ ಮರು ಚುನಾವಣೆಯಲ್ಲಿ ಮತ್ತೆ ಶಾಮನೂರು ಶಿವಶಂಕರಪ್ಪ ಮತ್ತು ಜಿಎನ್ ಮಲ್ಲಿಕಾರ್ಜುನಪ್ಪ ಸೆಣಸಾಟ ನಡೆಸಿದರು. ಆಗ ಜಿಎನ್ ಮಲ್ಲಿಕಾರ್ಜುನಪ್ಪ ಗೆದ್ದರು. ಆ ನಂತರದ ಚುನಾವಣೆಯಲ್ಲಿ ತಂದೆಯಂದಿರ ಬದಲಾಗಿ ಮಕ್ಕಳ ನಡುವೆ ಚುನಾವಣೆ ಕದನ ಶುರುವಾಯಿತು. 2004ರಲ್ಲಿ ಬಿಜೆಪಿಯಿಂದ ಜಿಎನ್‌ಎಂ ಪುತ್ರ ಜಿಎಂ ಸಿದ್ದೇಶ್ವರ್ ಕಣಕ್ಕಿಳಿದರೆ, ಕಾಂಗ್ರೆಸ್‌ನಿಂದ ಎಸ್‌ಎಸ್ ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ ಸ್ಪರ್ಧಿಸಿ ಎರಡು ಕುಟುಂಬದ ನಡುವಿನ ಚುನಾವಣೆ ಸ್ಪರ್ಧೆ, ಎರಡನೇ ತಲೆಮಾರಿಗೆ ದಾಟಿತು. ಈ ಚುನಾವಣೆಯಲ್ಲಿ ಬಿಜೆಪಿಯ ಸಿದ್ದೇಶ್ವರ್ 33 ಸಾವಿರ ಮತಗಳ ಅಂತರದಿಂದ ಗೆದ್ದರು.
ಆ ನಂತರ 2009ರಲ್ಲಿ ಮತ್ತೆ ಈ ಇಬ್ಬರೂ ಸ್ಪರ್ಧಿಸಿದರು, ಬಿಜೆಪಿಯ ಸಿದ್ದೇಶ್ವರ್ ಕೇವಲ 2024 ಮತಗಳ ಅಂತರದಿಂದ ಗೆದ್ದರು. ಆಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕಲ್ಲೇ ರುದ್ರೇಶ್, ಕಣದಿಂದ ಹಿಂದೆ ಸರಿದರೂ 10 ಸಾವಿರ ಮತ ಬಿದ್ದಿದ್ದವು, ಇದು ಬಿಜೆಪಿ ಗೆಲುವಿಗೆ ನೆರವಾಯಿತು. ಮತ್ತೆ 2013ರಲ್ಲಿ ಮತ್ತೆ ಇಬ್ಬರೂ ಸ್ಪರ್ಧಿಸಿದರು. ಆಗಲೂ ಬಿಜೆಪಿ ಇಲ್ಲಿ 17 ಸಾವಿರ ಮತಗಳ ಅಂತರದಿಂದ ಗೆದ್ದಿತು. 2019ರಲ್ಲಿ ಶಾಮನೂರು ಕುಟುಂಬದ ಯಾರೊಬ್ಬರೂ ಸ್ಪರ್ಧಿಸಲಿಲ್ಲ, ಕಾಂಗ್ರೆಸ್‌ನಿಂದ ಪಕ್ಷದ ಜಿಲ್ಲಾಧ್ಯಕ್ಷ ಎಚ್‌ಬಿ ಮಂಜಪ್ಪ ಎದುರಾಳಿಯಾಗಿ 1.60 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡರು. ಈ ಕ್ಷೇತ್ರದಲ್ಲಿ ಗೆಲುವಿನ ಸ್ಕೋರು ಎರಡೂ ಪಕ್ಷಗಳಿಗೂ ಸಮವಾಗಿದೆ.
ಈ ಬಾರಿ ಮಹಿಳಾ ಕಣ ?
2024ರಲ್ಲಿ ಜಿಎಂ ಸಿದ್ದೇಶ್ವರ್ ಬದಲಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಿಂದ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಪತ್ನಿ ಡಾ ಪ್ರಭಾ ಮಲ್ಲಿಕಾರ್ಜುನ್‌ಗೆ ಟಿಕೆಟ್ ಅಂತಿಮವಾಗಿದೆ. ಕಾಂಗ್ರೆಸ್‌ನಲ್ಲಿ ಬಹಳ ದಿನಗಳಿಂದ ಇವರ ಹೆಸರು ಕೇಳಿ ಬಂದಿತ್ತು, ಈ ಪಕ್ಷದಲ್ಲಿ ಮಹಿಳೆಗೆ ನೀಡುತ್ತಾರೆಂದೇ ಬಿಜೆಪಿಯಲ್ಲಿ ಮಹಿಳೆಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಹೈ ಕಮಾಂಡ್ ಈಗ ಕಾಂಗ್ರೆಸ್ ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಗೆ ಟಿಕೆಟ್ ನೀಡಿ ತಂದೆ, ಮಗ ನಂತರ ಸೊಸೆಯಂದಿರ ಕಾದಾಟ ನಡೆಯಲಿದೆ. ಈ ಎರಡು ಕುಟುಂಬ ಆರನೇ ಬಾರಿಗೆ ಚುನಾವಣಾ ಕಣದಲ್ಲಿ ಮುಖಾಮುಖಿ ಆಗಲಿವೆ.