Twitter: ಆದಾಯಕ್ಕಾಗಿ ಯೂಸರ್ ನೇಮ್ ಮಾರಾಟಕ್ಕೆ ಮುಂದಾದ ಟ್ವಿಟರ್; ಹೆಚ್ಚಾಗುತ್ತಿದೆ ಹ್ಯಾಕ್ ಆಗುವ ಆತಂಕ
ಟ್ವಿಟರ್ ಕಂಪನಿಯು (Twitter) ಆದಾಯ ವೃದ್ಧಿಸಿಕೊಳ್ಳಲೆಂದು ಹರಾಜು ಪ್ರಕ್ರಿಯೆ ಮೂಲಕ ‘ಯೂಸರ್ ನೇಂ’ಗಳನ್ನು (Usernames) ಹರಾಜಿಗೆ ಇರಿಸಲು ಮುಂದಾಗಿತ್ತು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಚಿಂತನೆಯನ್ನು ಸ್ವತಃ ಎಲಾನ್ ಮಸ್ಕ್ ಮುಂದಿಟ್ಟಿದ್ದರು ಎಂದು ಈ ವಿದ್ಯಮಾನದ ಬಗ್ಗೆ ಅರಿವಿರುವ ಇಬ್ಬರು ಉದ್ಯೋಗಿಗಳು ತಿಳಿಸಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಬಗ್ಗೆ ಕೆಲ ಬಳಕೆದಾರರೊಂದಿಗೆ ಟ್ವಿಟರ್ ಉದ್ಯೋಗಿಗಳು ಮಾತುಕತೆ ನಡೆಸಿದ್ದರು. ಆಕರ್ಷಕ ಯೂಸರ್ನೇಮ್ಗಳಿಗಾಗಿ ಆನ್ಲೈನ್ ಹರಾಜು ಪ್ರಕ್ರಿಯೆ ನಡೆಸುವ ಬಗ್ಗೆಯೂ ಚಿಂತನೆ ಆರಂಭವಾಗಿತ್ತು. @ ಚಿಹ್ನೆಯೊಂದಿಗೆ ತಮ್ಮಿಷ್ಟದ ಹೆಸರು ಅಥವಾ ಸಂಖ್ಯೆಗಳನ್ನು ಜೋಡಿಸಿಕೊಳ್ಳಲು ಅವಕಾಶ ನೀಡುವುದರಿಂದ ಆದಾಯ ಗಳಿಸುವ ಸಾಧ್ಯತೆಗಳ ಬಗ್ಗೆ ಕಂಪನಿಯಲ್ಲಿ ಗಂಭೀರ ಚರ್ಚೆಗಳು ನಡೆದಿದ್ದವು.
ಈ ಯೋಜನೆಯು ಮುಂದುವರಿಯುವ ಬಗ್ಗೆ ಯಾವುದೇ ಸ್ಪಷ್ಟ ಹೇಳಿಕೆಗಳನ್ನು ಕಂಪನಿ ನೀಡಿಲ್ಲ. ಒಂದು ವೇಳೆ ಯೂಸರ್ನೇಮ್ಗಳನ್ನು ಹರಾಜಿಗಿಡುವ ಪ್ರಕ್ರಿಯೆ ಆರಂಭಿಸಿದರೆ ಈಗಾಗಲೇ ಅಸ್ತಿತ್ವದಲ್ಲಿರುವ ಯೂಸರ್ನೇಮ್ಗಳ ಸ್ಥಿತಿಗತಿ ಏನಾಗುತ್ತದೆ ಎಂಬ ಬಗ್ಗೆ ಗೊಂದಲಗಳಿವೆ. ಟ್ವಿಟರ್ನಲ್ಲಿ ಖಾತೆ ತೆರೆದು ಯಾವುದೇ ಚಟುವಟಿಕೆಗಳನ್ನು ನಡೆಸದ ಸುಮಾರು 150 ಕೋಟಿ ಖಾತೆಗಳನ್ನು ಗುರುತಿಸಲಾಗಿದೆ. ಈ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಒಂದಿಷ್ಟು ಯೂಸರ್ನೇಮ್ಗಳನ್ನು ಲಭ್ಯಗೊಳಿಸುವ ಬಗ್ಗೆ ಮಸ್ಕ್ ಇತ್ತೀಚೆಗೆ ಮಾತನಾಡಿದ್ದರು. ಆದರೆ ಎಲ್ಲ ಬಗೆಯ ಖಾತೆಗಳಿಂದಲೂ ಟ್ವಿಟರ್ಗೆ ಹಣಸಿಗುವುದಿಲ್ಲ. ಕೇವಲ ಜನಪ್ರಿಯ ವ್ಯಕ್ತಿಗಳು, ಬ್ರಾಂಡ್ಗಳು ಮತ್ತು ಸೆಲಬ್ರಿಟಿ ಹೆಸರುಗಳಿಗೆ ಮಾತ್ರವೇ ಬೇಡಿಕೆ ಕುದುರಬಹುದು ಎಂದು ನಿರೀಕ್ಷಿಸಲಾಗಿದೆ.
ಕಳೆದ ಅಕ್ಟೋಬರ್ನಿಂದಲೂ ಟ್ವಿಟರ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಟ್ವಿಟರ್ ಖರೀದಿಗಾಗಿ ಮಸ್ಕ್ 44 ಶತಕೋಟಿ ಡಾಲರ್ ವ್ಯಯಿಸಿದ್ದರು. ಪ್ರಭಾವಿ ಸಾಮಾಜಿಕ ಮಾಧ್ಯಮವನ್ನು ಅತ್ಯಧಿಕ ಬೆಲೆ ತೆತ್ತ ಅವರು ತಾವು ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಆದಾಯ ಗಳಿಕೆ ಮಾರ್ಗಗಳನ್ನು ಹುಡುಕುತ್ತಲೇ ಇದ್ದಾರೆ. ಟ್ವಿಟರ್ನ ಇತರೆಲ್ಲ ಖರ್ಚುಗಳನ್ನು ಕಡಿಮೆ ಮಾಡಲು ಮಸ್ಕ್ ಮೊದಲು ಮುಂದಾಗಿದ್ದರು. ಉದ್ಯೋಗಿಗಳನ್ನು ಮನೆಗೆ ಕಳಿಸುವುದು, ಟ್ವಿಟರ್ಗೆ ಸೇವೆ ಒದಗಿಸುವವರಿಗೆ ಪಾವತಿ ನಿಲ್ಲಿಸುವ ಕ್ರಮಗಳನ್ನು ಘೋಷಿಸಲಾಗಿತ್ತು. ವೆಚ್ಚ ತಗ್ಗಿಸುವುದರ ಜೊತೆಗೆ ಹೊಸದಾಗಿ ಆದಾಯ ಸೃಷ್ಟಿಸುವ ಕ್ರಮಗಳನ್ನೂ ಟ್ವಿಟರ್ ಹುಡುಕುತ್ತಿತ್ತು. ಅದರಂತೆ ವೆರಿಫಿಕೇಶನ್ ಬ್ಯಾಡ್ಜ್ಗಳಿಗೆ ಮೌಲ್ಯ ನಿಗದಿಪಡಿಸಲಾಗಿತ್ತು.
ಇದರ ಜೊತೆಗೆ ಎಲ್ಲವೂ ಲಭ್ಯವಿರುವ ಆ್ಯಪ್ ಒಂದನ್ನು ರೂಪಿಸುವ ಆಶಯವಿದೆ ಎಂದು ಮಸ್ಕ್ ಹೇಳಿಕೊಂಡಿದ್ದರು. ಚೀನಾದ ‘ವಿಚಾಟ್’ ಮಾದರಿಯನ್ನು ಮಸ್ಕ್ ಹೇಳಿಕೆ ನೆನಪಿಗೆ ತಂದಿತ್ತು. ‘ವಿಚಾಟ್’ ಆ್ಯಪ್ ಸುಮಾರು 100 ಕೋಟಿ ಬಳಕೆದಾರರನ್ನು ಹೊಂದಿದ್ದು, ಸುದ್ದಿ ಓದಲು, ಗೆಳೆಯರೊಂದಿಗೆ ಸಂಪರ್ಕದಲ್ಲಿರಲು, ಹಣ ಪಾವತಿಸಲು ಮತ್ತು ಫುಡ್ ಆರ್ಡರ್ ಮಾಡಲು ಈ ಆ್ಯಪ್ನಲ್ಲಿ ಅವಕಾಶವಿದೆ.
ಟ್ವಿಟರ್ ಹ್ಯಾಂಡ್ಲ್ ಎಂದು ಕರೆಯಲಾಗುವುದು ಯೂನಿಕ್ ಯೂಸರ್ ನೇಮ್ಗಳು ಈಗ ದೊಡ್ಡ ವ್ಯವಹಾರವಾಗಿ ಬೆಳೆದಿದೆ. ಬಹುಮುಂಚೆ ಸಾಮಾಜಿಕ ಮಾಧ್ಯಮಗಳಿಗೆ ಬಂದವರು ಹಲವು ಆಕರ್ಷಕ ಹ್ಯಾಂಡ್ಲ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಈ ಪೈಕಿ ಹಲವು ಹ್ಯಾಂಡ್ಲ್ಗಳು ನಿಷ್ಕ್ರಿಯವಾಗಿದ್ದು ಇಂಥವುಗಳ ಪೈಕಿ ಕೆಲವಕ್ಕೆ ಡಿಜಿಟಲ್ ಮಾರ್ಕೆಟಿಂಗ್ ವಲಯದಲ್ಲಿ ಬಹುಬೇಡಿಕೆಯಿದೆ. ಇಷ್ಟುದಿನ ಕಳ್ಳದಾರಿಯಲ್ಲಿ ನಡೆಯುತ್ತಿದ್ದ ವ್ಯವಹಾರವನ್ನು ಇದೀಗ ಸ್ವತಃ ತಾನೇ ನಿರ್ವಹಿಸಲು ಟ್ವಿಟರ್ ಮುಂದಾಗಿದೆ. ಬಹುಬೇಡಿಕೆಯಿರುವ ಹೆಸರುಗಳಲ್ಲಿ ಸಿದ್ಧವಾಗಿರುವ ಆದರೆ ಸದ್ಯಕ್ಕೆ ನಿಷ್ಕ್ರಿಯ ಖಾತೆಗಳನ್ನು ಪತ್ತೆ ಮಾಡುವ ಟ್ವಿಟರ್ ಉದ್ಯೋಗಿಗಳನ್ನು ಅಂಥವನ್ನು ಆನ್ಲೈನ್ ಹರಾಜಿಗೆ ಇಡಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಟರ್ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಟ್ವಿಟರ್ ಹ್ಯಾಂಡ್ಲ್ ಹರಾಜಿಗಿಡುವ ಪದ್ಧತಿಯು ಟ್ವಿಟರ್ ಈವರೆಗೆ ರೂಢಿಸಿಕೊಂಡಿದ್ದ ಕಾರ್ಯನಿರ್ವಹಣಾ ವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಇದರಿಂದ ಖಾತೆಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಬಹುದು ಎಂಬ ಆತಂಕ ಟ್ವಿಟರ್ನಲ್ಲಿ ಕಾರ್ಯನಿರ್ವಹಿಸು ತಂತ್ರಜ್ಞರಲ್ಲಿತ್ತು. 2020ರಲ್ಲಿ ಫ್ಲೋರಿಡಾ ನಗರದ 17 ವರ್ಷಗಳ ಯುವಕನೊಬ್ಬನನ್ನು ಬಂಧಿಸಲಾಗಿತ್ತು. ಈತ ಸೆಲಬ್ರಿಟಿಗಳ ಖಾತೆಗಳನ್ನು ಹ್ಯಾಕ್ ಮಾಡಿ, ಯೂಸರ್ ನೇಮ್ಗಳನ್ನು ಮಾರಲು ಮುಂದಾಗಿದ್ದ ವಿಚಾರವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಈ ಬಗ್ಗೆ ಪ್ರತಿಕ್ರಿಯೆ ಕೋರಿದ ಪತ್ರಕರ್ತರ ಫೋನ್ ಕರೆ, ಇಮೇಲ್ಗಳಿಗೆ ಮಸ್ಕ್ ಮತ್ತು ಟ್ವಿಟರ್ ಕಂಪನಿಯ ಪ್ರತಿನಿಧಿಗಳು ಯಾವುದೇ ಉತ್ತರ ನೀಡಲಿಲ್ಲ.