ತೆಲಂಗಾಣ ಕೈ ಶಾಸಕರು ಇತರ ಪಕ್ಷಕ್ಕೆ ಸೆಳೆಯದಂತೆ ರಕ್ಷಣೆಗೆ ಹೈದರಾಬಾದ್ ತಲುಪಿದ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್..!
ಹೈದರಾಬಾದ್, ಡಿಸೆಂಬರ್ 3: ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಈ ಮಧ್ಯೆ, ಆಡಳಿತಾರೂಢ ಬಿಆರ್ಎಸ್ ಕೂಡ ‘ಕೈ’ ಪಡೆಗೆ ತೀವ್ರ ಪೈಪೋಟಿ ನೀಡುತ್ತಿದೆ. ಪಕ್ಷದ ಶಾಸಕರನ್ನು ಇತರ ಪಕ್ಷಗಳು ಸೆಳೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಇದೀಗ ಕಾಂಗ್ರೆಸ್ನ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಶಿವಕುಮಾರ್ ಅವರು ಈಗಾಗಲೇ ಹೈದರಾಬಾದ್ ತಲುಪಿದ್ದಾರೆ. ಅವರ ಜತೆ ಕರ್ನಾಟಕದ ಇತರ ಕೆಲವು ಸಚಿವರೂ ಇದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನ ಹೊರಗೆ ಬಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಕಾಂಗ್ರೆಸ್ನ ನೂತನ ಶಾಸಕರಾಗಿ ಆಯ್ಕೆಯಾಗುವವರನ್ನು ಕರೆದೊಯ್ಯಲೆಂದೇ ಈ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಮತ ಎಣಿಕೆಯ ನಂತರ ಪಕ್ಷದ ಶಾಸಕರನ್ನು ಬೆಂಗಳೂರು ಅಥವಾ ಯಾವುದೇ ಕಾಂಗ್ರೆಸ್ ಆಡಳಿತ ಇರುವ ರಾಜ್ಯಕ್ಕೆ ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸಲಾಗುವುದು. ಕಾಂಗ್ರೆಸ್‌ಗೆ 70 ಸ್ಥಾನಗಳಿಗಿಂತ ಕಡಿಮೆಯಾದರೆ, ಶಾಸಕರನ್ನು ಬೆಂಗಳೂರು ಅಥವಾ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಶುಕ್ರವಾರವೇ ವರದಿಯಾಗಿತ್ತು. ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರೂ ಈ ಕುರಿತು ಸುಳಿವು ನೀಡಿದ್ದರು.
ಗೆಲ್ಲುವ ಶಾಸಕರು ‘ಕೈ’ ತಪ್ಪದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಆಚೆ ಬರದಂತೆ ಸೂಚನೆ ನೀಡಲಾಗಿದೆ. ಎಐಸಿಸಿ ವೀಕ್ಷಕರು ಮತ ಎಣಿಕೆ ಬಳಿ ಹಾಜರಿರುತ್ತಾರೆ. ಶೀಘ್ರವೇ ಹಲವು ಎಐಸಿಸಿ ನಾಯಕರು ತೆಲಂಗಾಣಕ್ಕೆ ಬರಲಿದ್ದಾರೆ.
ಗೆದ್ದ ಅಭ್ಯರ್ಥಿಗಳು ಕರ್ನಾಟಕಕ್ಕೆ
ಕರ್ನಾಟಕದ ಕೆಲವು ಶಾಸಕರನ್ನು ಕಾಂಗ್ರೆಸ್ ಕೂಡ ಕರೆಸಿಕೊಂಡಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬ ಶಾಸಕರನ್ನು ಕಳುಹಿಸಲಾಗುವುದು ಎಂದು ವರದಿಯಾಗಿದೆ. ವಿಜೇತರನ್ನು ಹೈದರಾಬಾದ್‌ಗೆ ಕರೆತರುವ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರು ಕರ್ನಾಟಕದ ಶಾಸಕರಿಗೆ ವಹಿಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳನ್ನು ವಿಶೇಷ ಬಸ್‌ಗಳಲ್ಲಿ ಕರ್ನಾಟಕಕ್ಕೆ ಕರೆದೊಯ್ಯುವ ಸಾಧ್ಯತೆ ಬಲವಾಗಿದೆ. ಅದಕ್ಕಾಗಿಯೇ ಮೂರು ಬಸ್‌ಗಳನ್ನು ಸಿದ್ಧಪಡಿಸಲಾಗಿದೆ.