ಇಂದು ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಸರಣಿ
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಸರಣಿಯು ಇಂದಿನಿಂದ ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ 131 ಪಂದ್ಯಗಳನ್ನಾಡಿದ್ದು, ಈ ವೇಳೆ ಇಂಗ್ಲೆಂಡ್ ತಂಡವು 50 ರಲ್ಲಿ ಜಯ ಸಾಧಿಸಿದೆ. ಇನ್ನು ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 31 ಪಂದ್ಯಗಳಲ್ಲಿ ಮಾತ್ರ. ಹಾಗೆಯೇ 50 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿದೆ.
ಇನ್ನು ಉಭಯ ತಂಡಗಳು ಕೊನೆಯ ಬಾರಿಗೆ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದು 2022 ರಲ್ಲಿ. ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ನಲ್ಲಿ ನಡೆದಿದ್ದ 5 ಪಂದ್ಯಗಳ ಈ ಸರಣಿಯು 2-2 ಅಂತರದಿಂದ ಕೊನೆಗೊಂಡಿತ್ತು. ಇದೀಗ ಮತ್ತೊಮ್ಮೆ ಐದು ಪಂದ್ಯಗಳ ಸರಣಿಯೊಂದಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿದೆ. ಹೀಗಾಗಿ ಈ ಸರಣಿಯಲ್ಲೂ ಎರಡೂ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಸ್ಟಾರ್ ಆಟಗಾರರು ಅಲಭ್ಯ:
ಹೈದರಾಬಾದ್ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ. ಹಾಗೆಯೇ ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಕೂಡ ವೈಯುಕ್ತಿಕ ಕಾರಣಗಳಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಇಲ್ಲಿ ಬ್ರೂಕ್ ಬದಲಿಗೆ ಡಾನ್ ಲಾರೆನ್ಸ್ ಆಯ್ಕೆಯಾಗಿದ್ದರೆ, ಅತ್ತ ವಿರಾಟ್ ಕೊಹ್ಲಿ ಬದಲಿ ಆಟಗಾರನಾಗಿ ರಜತ್ ಪಾಟಿದಾರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ಲೇಯಿಂಗ್ ಇಲೆವೆನ್ ಘೋಷಿಸಿದ ಇಂಗ್ಲೆಂಡ್:
ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವು ಒಂದು ದಿನ ಮುಂಚಿತವಾಗಿಯೇ ಪ್ಲೇಯಿಂಗ್ ಇಲೆವೆನ್ ಘೋಷಿಸಿರುವುದು ವಿಶೇಷ. ಈ ಆಡುವ ಬಳಗದಲ್ಲಿ ಮೂವರು ಸ್ಪಿನ್ನರ್ಗಳಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ತಂಡದಲ್ಲಿ ಏಕೈಕ ವೇಗಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅಂದರೆ ಹೈದರಾಬಾದ್ ಪಿಚ್ ಸ್ಪಿನ್ನರ್ಗಳಿಗೆ ಸಹಕಾರಿಯಾಗಿರುವ ಕಾರಣ ಇಂಗ್ಲೆಂಡ್ ಓರ್ವ ವೇಗಿ ಹಾಗೂ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ. ಅದರಂತೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ.
- 1. ಝಾಕ್ ಕ್ರಾಲಿ
- 2. ಬೆನ್ ಡಕೆಟ್
- 3. ಒಲಿ ಪೋಪ್
- 4. ಜೋ ರೂಟ್
- 5. ಜಾನಿ ಬೈರ್ಸ್ಟೋವ್
- 6. ಬೆನ್ ಸ್ಟೋಕ್ಸ್ (ನಾಯಕ)
- 7. ಬೆನ್ ಫೋಕ್ಸ್ (ವಿಕೆಟ್ ಕೀಪರ್)
- 8. ರೆಹಾನ್ ಅಹ್ಮದ್
- 9. ಟಾಮ್ ಹಾರ್ಟ್ಲಿ
- 10. ಮಾರ್ಕ್ ವುಡ್
- 11. ಜ್ಯಾಕ್ ಲೀಚ್
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂಡರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್ಸ್ಟೋವ್, ಶೋಯೆಬ್ ಬಶೀರ್, ಡ್ಯಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಭಾರತ ಟೆಸ್ಟ್ ತಂಡ (ಮೊದಲೆರಡು ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೇಲ್ (ವಿಕೇಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
- ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
- ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
- ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
- ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)