ಇಂದು ಬದ್ಧವೈರಿಗಳ ನಡುವೆ ಫೈನಲ್ ಕಾಳಗ; ಪಾಕ್ ಮುಂದೆ ಭಾರತವೇ ಬಲಿಷ್ಠ!
ಒಮಾನ್‌ನ ಸಲಾಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ನಡೆಯಲಿರುವ ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಬದ್ಧ ವೈರಿಗಳ ಕಾಳಗ ರಾತ್ರಿ 9:30ಕ್ಕೆ ಪ್ರಾರಂಭವಾಗಲಿದೆ ಮತ್ತು ಭಾರತದಲ್ಲಿ ನೇರ ಪ್ರಸಾರವಾಗಲಿದೆ.
ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅಜೇಯರಾಗಿ ಫೈನಲ್ಗೆ ಎಂಟ್ರಿಕೊಟ್ಟಿವೆ. ಈ ಮೊದಲು ಲೀಗ್ ಹಂತಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯ 1-1 ರಲ್ಲಿ ಡ್ರಾಗೊಂಡಿತ್ತು. ಆದಾಗ್ಯೂ, ಭಾರತ ತಂಡ, ಪಾಕ್ ತಂಡಕ್ಕಿಂತ ಹೆಚ್ಚಿನ ಗೋಲು ಬಾರಿಸಿರುವುದರಿಂದಾಗಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಚೈನೀಸ್ ತೈಪೆ ವಿರುದ್ಧ 18-0 ಮತ್ತು ಜಪಾನ್ ವಿರುದ್ಧ 3-1 ಅಂತರದ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಆ ಬಳಿಕ ಭಾರತ ತನ್ನ ಅಂತಿಮ ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್ ಅನ್ನು 17-0 ಅಂತರದಿಂದ ಸೋಲಿಸಿತು. ನಂತರ ಸೆಮಿಫೈನಲ್‌ನಲ್ಲಿ ಕೊರಿಯಾ ತಂಡವನ್ನು 9-1 ಗೋಲುಗಳಿಂದ ಮಣಿಸಿದ ಭಾರತ ಇದೀಗ ಫೈನಲ್ಗೆ ಎಂಟ್ರಿಕೊಟ್ಟಿದೆ.
ಏತನ್ಮಧ್ಯೆ, ಪಾಕಿಸ್ತಾನ ಹಾಕಿ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ 15-1 ರಿಂದ ಚೈನೀಸ್ ತೈಪೆಯನ್ನು ಸೋಲಿಸಿತ್ತು. ನಂತರದ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 9-0 ಅಂತರದಿಂದ ಸೋಲಿಸಿದರೆ, ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತ್ತು. ಬಳಿಕ ಸೆಮಿಸ್‌ನಲ್ಲಿ ಮಲೇಷ್ಯಾವನ್ನು 6-2 ಗೋಲುಗಳಿಂದ ಸೋಲಿಸಿದ ಪಾಕ್, ಇದೀಗ ಭಾರತದ ವಿರುದ್ಧ ಫೈನಲ್‌ನಲ್ಲಿ ಕಾದಾಡಲಿದೆ.
ಪ್ರಸ್ತುತ ಒಂಬತ್ತು ಗೋಲುಗಳೊಂದಿಗೆ ಟೂರ್ನಮೆಂಟ್‌ನ ಜಂಟಿ ಅಗ್ರ ಸ್ಕೋರರ್ ಆಗಿರುವ ಪಾಕಿಸ್ತಾನದ ಅಬ್ದುಲ್ ರೆಹಮಾನ್ ಮತ್ತು ಏಳು ಸ್ಟ್ರೈಕ್‌ಗಳನ್ನು ಹೊಂದಿರುವ ಭಾರತದ ಆಕ್ರಮಣಕಾರಿ ಆಟಗಾರ ಅರಿಜೀತ್ ಸಿಂಗ್ ಹುಂಡಾಲ್ ನಡುವಿನ ಯುದ್ಧಕ್ಕೆ ಫೈನಲ್ ವೇದಿಕೆ ಸಜ್ಜಾಗಿದೆ.
ಭಾರತ ಮತ್ತು ಪಾಕಿಸ್ತಾನ ಈ ಹಿಂದೆ ಮೂರು ಬಾರಿ ಜೂನಿಯರ್ ಏಷ್ಯಾಕಪ್ ಹಾಕಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. 1996ರ ಫೈನಲ್‌ನಲ್ಲಿ ಪಾಕಿಸ್ತಾನ ಗೆದ್ದರೆ, 2004ರಲ್ಲಿ ಭಾರತ ಜಯಭೇರಿ ಬಾರಿಸಿತ್ತು.
2015 ರಲ್ಲಿ ಮಲೇಷ್ಯಾದಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಭಾರತವು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.