ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಕೂಟದಿಂದ ಸ್ಪರ್ಧಿಸದೇ ಟಿಎಂಸಿ ಏಕಾಂಗಿ ಹೋರಾಟ: ಮಮತಾ ಬ್ಯಾನರ್ಜಿ
ಕೊಲ್ಕತ್ತಾ, ಜ.24: ಇಂಡಿಯಾ ಮಿತ್ರಕೂಟಕ್ಕೆ (INDIA alliance) ಭಾರೀ ದೊಡ್ದ ಹಿನ್ನಡೆಯಾಗಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಹಂಚಿಕೆ ಬಗ್ಗೆ ಗೊಂದಲ ಉಂಟಾಗಿದ್ದು, ಇದೀಗ ಇಂಡಿಯಾ ಮಿತ್ರಕೂಟಕ್ಕೆ ಬೆಂಬಲ ನೀಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಉಲ್ಟಾ ಹೊಡೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮಾತ್ರ ತಮ್ಮ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಟಿಎಂಸಿ ಭದ್ರಕೋಟೆಯಾದ ಬಿರ್ಭುಮ್ ಜಿಲ್ಲೆಯಲ್ಲಿ ತನ್ನ ಪಕ್ಷದ ಸದಸ್ಯರ ಜತೆಗೆ ಸಭೆ ನಡೆಸಿದ ಮಮತಾ ಬ್ಯಾನರ್ಜಿ, ಇಂಡಿಯಾ ಮಿತ್ರಕೂಟ ನಡೆಸಿದ ಕ್ಷೇತ್ರ ಹಂಚಿಕೆ ಸಭೆಯಲ್ಲಿ ರಾಜ್ಯದಲ್ಲಿ ಸೀಟುಗಳನ್ನು ಹಂಚಿಕೊಳ್ಳುವ ತನ್ನ ಪ್ರಸ್ತಾಪಗಳನ್ನು ನಿರಾಕರಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಟಿಎಂಸಿ ಮುಖಂಡರ ಸಭೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧರಾಗುವಂತೆ ಹಾಗೂ ಸೀಟು ಹಂಚಿಕೆಯ ಮಾತುಕತೆಗಳ ಬಗ್ಗೆ ಯೋಚಿಸಬೇಡಿ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇನ್ನು ಇದಕ್ಕೂ ಮುನ್ನ ಕಾಂಗ್ರೆಸ್ನ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಮತಾ ಬ್ಯಾನರ್ಜಿ ಅವರನ್ನು ಅವಕಾಶವಾದಿ, ಅವರ ಬೆಂಬಲದಿಂದ ಲೋಕಸಭೆ ಚುನಾವಣೆಯನ್ನು ನಾವು ಎದುರಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಬಾರಿ ಮಮತಾ ಬ್ಯಾನರ್ಜಿ ಕೃಪೆಯಿಂದ ಚುನಾವಣೆ ನಡೆಯುವುದಿಲ್ಲ. ಮಮತಾ ಬ್ಯಾನರ್ಜಿ ಬಿಟ್ಟು ಹೋಗುತ್ತಿರುವ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಟಿಎಂಸಿಯನ್ನು ಸೋಲಿಸಲಿದೆ. ಚುನಾವಣೆಯನ್ನು ಹೇಗೆ ಎದುರಿಸಬೇಕೆಂದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ. ಮಮತಾ ಬ್ಯಾನರ್ಜಿ ಅವಕಾಶವಾದಿ, ಮಮತಾ ಅವರು 2011 ರಲ್ಲಿ ಕಾಂಗ್ರೆಸ್ನ ಕರುಣೆಯೊಂದಿಗೆ ಅಧಿಕಾರಕ್ಕೆ ಬಂದರು ಎಂದು ಮಮತಾ ಅವರನ್ನು ಟೀಕಿಸಿದರು.
ಅಧೀರ್ ರಂಜನ್ ಚೌಧರಿ ಈ ಹೇಳಿಕೆಗೆ ಪ್ರಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ, ಮಮತಾ ಬ್ಯಾನರ್ಜಿ ಅವರು ನಮ್ಮ ಜತೆಗೆ ಒಳ್ಳೆಯ ರೀತಿಯಲ್ಲಿದ್ದಾರೆ. ಆದರೆ ಕೆಲವೊಂದು ಬಾರಿ ಹೀಗೆಲ್ಲ ಅವರ ನಾಯಕರು ಹಾಗೂ ನಮ್ಮ ನಾಯಕರು ಪರಸ್ಪರ ಮಾತನಾಡುತ್ತಾರೆ. ಅದಕ್ಕೆ ಕಿವಿ ಕೂಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಒಟ್ಟು 42 ಲೋಕಸಭೆ ಕ್ಷೇತ್ರಗಳಲ್ಲಿ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿ ಎಂಬ ಟಿಎಂಸಿ ಪ್ರಸ್ತಾಪದ ಬಗ್ಗೆ ರಾಜ್ಯ ಕಾಂಗ್ರೆಸ್ ನಿರಾಶೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ 10-12 ಸೀಟುಗಳನ್ನು ಕೇಳಿತ್ತು ಇದಕ್ಕೆ ನಿರಾಕರಿಸಿದ ಟಿಎಂಸಿ ಕಾಂಗ್ರೆಸ್ ಜತೆಗೆ ಸೀಟು ಹಂಚಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಜೊತೆ ಸೀಟು ಹಂಚಿಕೆಯ ಬಗ್ಗೆ ನಾವು ಯೋಚಿಸುವ ಅಗತ್ಯವಿಲ್ಲ ಎಂದು ತನ್ನ ವರಿಷ್ಠರಿಗೆ ಹೇಳಿದ್ದಾರೆ.
ಟಿಎಂಸಿ ಇಂಡಿಯಾ ಮೈತ್ರಿಕೂಟದ ಆಧಾರ ಸ್ತಂಭವಾಗಿದೆ: ಜೈರಾಮ್ ರಮೇಶ್
ಮಮತಾ ಬ್ಯಾನರ್ಜಿ ಅವರ ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿದ್ದಾರೆ. ಸಿಎಂ ಮಮತಾ ಹೇಳಿಕೆ ಬಿಜೆಪಿಯನ್ನು ಸೋಲಿಸುವುದೇ ಆಗಿದೆ. ಮಮತಾ ಬ್ಯಾನರ್ಜಿ ಹೇಳಿಕೆಯನ್ನು ರಮೇಶ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಇಂಡಿಯಾ ಮೈತ್ರಿಕೂಟ ಅನ್ನೋದು ದೀರ್ಘ ಪ್ರಯಾಣ, ಈ ದೀರ್ಘ ಪ್ರಯಾಣದ ವೇಳೆ ಕೆಲವೊಮ್ಮೆ ಸ್ಪೀಡ್ ಬ್ರೇಕರ್ ಬರುತ್ತವೆ. ಟಿಎಂಸಿ ಇಂಡಿಯಾ ಮೈತ್ರಿಕೂಟದ ಆಧಾರ ಸ್ತಂಭವಾಗಿದೆ. ಮಮತಾ ಇಲ್ಲದ ಇಂಡಿಯಾ ಮೈತ್ರಿಕೂಟ ಊಹಿಸಲು ಆಗಲ್ಲ ಎಂದು ಹೇಳಿದ್ದಾರೆ.
ಇನ್ನು ಪಂಜಾಬ್‌ನಲ್ಲೂ ಆಪ್ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧೆ ಬಗ್ಗೆ ಇಂಗಿತ ವ್ಯಕ್ತಪಡಿಸಿದೆ. ಮಮತಾ ಬ್ಯಾನರ್ಜಿ ಶಾಕ್ ಬಳಿಕ ಆಪ್‌ನಿಂದಲೂ ಶಾಕ್ ನೀಡವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.