ಟೈಟಾನಿಕ್ ಹಡಗಿನ ಕೊನೆಯ ಭೋಜನದ ಮೆನು ಬರೋಬ್ಬರಿ 84.5 ಲಕ್ಷ ರೂ.ಗೆ ಮಾರಾಟ..!
ಲಂಡನ್: ಟೈಟಾನಿಕ್ (Titanic) ಹಡಗು ಯಾರಿಗೆ ಗೊತ್ತಿಲ್ಲ ಹೇಳಿ? ಅಟ್ಲಾಂಟಿಕ್ (Atlantic) ಮಹಾ ಸಾಗರದಲ್ಲಿ 1912ರ ಏಪ್ರಿಲ್ 14ರಂದು ಮುಳುಗಿದ ಈ ಬೃಹತ್ ಹಡಗಿನ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಇಂಗ್ಲೆಂಡ್‌ನಲ್ಲಿ ಶನಿವಾರ ಹರಾಜಿಗೆ ಬಂದ ಟೈಟಾನಿಕ್ ಹಡಗಿನ ಪ್ರಥಮ ದರ್ಜೆ ಭೋಜನದ ಮೆನು ಬರೋಬ್ಬರಿ 83,000 ಪೌಂಡ್ (84.5 ಲಕ್ಷ ರೂ.)ಗೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ. 1912ರ ಏಪ್ರಿಲ್ 14ರ ರಾತ್ರಿ ಹಡಗು ತನ್ನ ಮೊದಲ ಅಟ್ಲಾಂಟಿಕ್ ಸಮುದ್ರಯಾನದಲ್ಲಿ ಹಿಮಗಡ್ಡೆಗೆ ಡಿಕ್ಕಿ ಹೊಡೆದು ಮುಳುಗುವ ಮೂರು ದಿನಗಳ ಮೊದಲು ಪ್ರಥಮ ದರ್ಜೆ ಪ್ರಯಾಣಿಕರಿಗೆ ಒದಗಿಸಲಾದ ಕೊನೆಯ ಭೋಜನದ ಮೆನು ಇದಾಗಿದೆ.
ಮೆನುವಿನಲ್ಲಿ ಏನೆಲ್ಲ ಇದೆ?
ಈ ಮೆನುವಿನ ಮೇಲೆ ಏಪ್ರಿಲ್ 11ರ ದಿನಾಂಕ ಮುದ್ರಿಸಲಾಗಿದೆ. ಆ ದಿನ ಸಂಜೆ ಏಪ್ರಿಕಾಟ್ ಮತ್ತು ಫ್ರೆಂಚ್ ಐಸ್ ಕ್ರೀಮ್‌ನೊಂದಿಗೆ ಸಿಹಿತಿಂಡಿ, ಮೊಟ್ಟೆ, ಜಾಮ್, ಬ್ರಾಂಡಿ, ಸೇಬು, ಚೆರ್ರಿ, ಸಕ್ಕರೆ ಮತ್ತು ಮಸಾಲೆಗಳ ಮಿಶ್ರಣವನ್ನು ಒದಗಿಸಲಾಗಿತ್ತು. ವೈಟ್ ಸ್ಟಾರ್ ಲೋಗೋವನ್ನು ಹೊಂದಿರುವ ಮೆನುವಿನಲ್ಲಿ ಬಾತುಕೋಳಿ ಮತ್ತು ಕೋಳಿ ಮಾಂಸ, ಆಲೂಗಡ್ಡೆ, ಅಕ್ಕಿಯಿಂದ ಮಾಡಿದ ತಿಂಡಗಳ ಪಟ್ಟಿಯನ್ನು ಮುದ್ರಿಸಲಾಗಿದೆ.
ಈ ಐತಿಹಾಸಿಕ ಮೆನು ಟೈಟಾನಿಕ್ ಹಡಗು ಐರ್‌ಲ್ಯಾಂಡ್‌ನ ಕ್ವೀನ್ಸ್ ಟೌನ್‌ನಿಂದ ನ್ಯೂಯಾರ್ಕ್‌ಗೆ ಹೊರಟ ಮರುದಿನದ ಆಹಾರದ ಪಟ್ಟಿಯನ್ನು ಒಳಗೊಂಡಿದೆ. ಇದನ್ನು ಹೆನ್ರಿ ಆಲ್ಡ್ರಿಡ್ಜ್ & ಮತ್ತು ಮಕ್ಕಳು ಟಾರ್ಟನ್ ಡೆಕ್ ಕಂಬಳಿ ಸೇರಿದಂತೆ ಇತರ ಟೈಟಾನಿಕ್‌ನ ವಸ್ತುಗಳೊಂದಿಗೆ ಹರಾಜು ಹಾಕುತ್ತಿದ್ದಾರೆ. ನೋವಾ ಸ್ಕಾಟಿಯಾದ ಡೊಮಿನಿಯನ್‌ನ ಸಮುದಾಯ ಇತಿಹಾಸಕಾರ ಲೆನ್ ಸ್ಟಿಫನ್ಸನ್‌ಗೆ ಸೇರಿದ 1960ರ ದಶಕದ ಫೋಟೊ ಆಲ್ಬಂನಲ್ಲಿ ಕಂಡುಬರುವ ಈ ಮೆನು ಅಮೂಲ್ಯ ದಾಖಲೆ ಎಂದು ಹರಾಜು ಸಂಸ್ಥೆಯ ಮ್ಯಾನೇಜರ್ ಆಂಡ್ರ್ಯೂ ಆಲ್ಡ್ರಿಡ್ಜ್ ಹೇಳಿದ್ದಾರೆ.
“ನಾನು ಜಾಗತಿಕವಾಗಿ ಹಲವಾರು ವಸ್ತು ಸಂಗ್ರಹಾಲಯಗಳ ವ್ಯವಸ್ಥಾಪಕರೊಂದಿಗೆ ಮತ್ತು ಹಲವು ಟೈಟಾನಿಕ್ ವಸ್ತು ಸಂಗ್ರಾಹಕರೊಂದಿಗೆ ಮಾತನಾಡಿದ್ದೇನೆ. ಆದರೆ ಬೇರೆಲ್ಲಿಯೂ ಈ ರೀತಿಯ ಇನ್ನೊಂದು ದಾಖಲೆಯನ್ನು ಕಂಡುಬಂದಿಲ್ಲ” ಎಂದು ಆಲ್ಡ್ರಿಡ್ಜ್ ಹೇಳಿದ್ದಾರೆ.
ವಿವಿಧ ವರ್ಗಗಳ ಆಧಾರದಲ್ಲಿ ಹರಾಜು ಕೂಗಲಾಗುತ್ತದೆ. ಹಡಗಿನ ಅವಶೇಷಗಳಿಂದ ವಶಪಡಿಸಿಕೊಳ್ಳಲಾದ ವಸ್ತುಗಳು, ಬದುಕುಳಿದವರ ಒಡೆತನದ ವಸ್ತುಗಳು ಮತ್ತು ಎಪ್ರಿಲ್ 11ರ ಐಷಾರಾಮಿ ಭೋಜನದ ಮೆನುವಿನಂತಹ ಇತರ ವಸ್ತುಗಳನ್ನು ಹರಾಜಿನ ಮೂಲಕ ಪಡೆಯುವ ವ್ಯವಸ್ಥೆ ಇದೆ. ಸದ್ಯ ದಾಖಲೆಯ ಮೊತ್ತಕ್ಕೆ ಹರಾಜಾದ ಈ ಮೆನುವನ್ನು ಮುಳುಗಿದ ಹಡಗಿನಲ್ಲಿದ್ದ ಸಂತ್ರಸ್ತರೊಬ್ಬರ ದೇಹದಿಂದ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಕ್ಷೇಪ
ಪ್ಲೈ ಮೌತ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹ್ಯಾರಿ ಬೆನೆಟ್ ಈ ರೀತಿಯ ಹರಾಜು ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಮೃತದೇಹಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ನಂಬಲಾದ ವಸ್ತುಗಳ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯವಿದೆ. ನೈತಿಕವಾಗಿ ಈ ರೀತಿಯ ಪ್ರಕ್ರಿಯೆ ಸರಿಯಲ್ಲ ಎಂದು ಅವರು ಹೇಳುತ್ತಾರೆ.