ತೀರ್ಥಹಳ್ಳಿ: ನವವಿವಾಹಿತೆ ನೇಣಿಗೆ ಶರಣು
ಶಿವಮೊಗ್ಗ ಜನವರಿ 18: ನವವಿವಾಹಿತೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶರ್ಮಿತಾ ಬಿ.ಯು. (24) ಎಂದು ತಿಳಿದುಬಂದಿದೆ. ಬಿಜ್ಜಳ ಗ್ರಾಮದ ಶರ್ಮಿತಾ ಎಂಬ ಯುವತಿ 2023ರ ಮಾರ್ಚ್ ತಿಂಗಳಿನಲ್ಲಿ ದಾಸನಕೊಡಿಗೆ ಗ್ರಾಮದ ವಿದ್ಯಾರ್ಥ್ ಎಂಬ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದರು.
ಪತಿ ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ರಾತ್ರಿ ಪಾಳಿಯ ಕೆಲಕ್ಕೆ ಪತಿ ತೆರಳಿದ್ದ ಸಂದರ್ಭದಲ್ಲಿ ಶರ್ಮಿತಾ ನೇಣಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ಪತಿಯ ಮನೆಯಲ್ಲಿ ಅತ್ತೆ, ಮಾವ ಇದ್ದರು. ಎಂದಿನಂತೆ ಮನೆಯ ಉಪ್ಪರಿಗೆ ಕೊಠಡಿಗೆ ರಾತ್ರಿ ಮಲಗಲು ಶರ್ಮಿತಾ ತೆರಳಿದ್ದಾರೆ. ಆದರೆ ಬೆಳಿಗ್ಗೆ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಅನುಮಾನದಿಂದ ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ಶರ್ಮಿತಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಶರ್ಮಿತಾ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ತಕ್ಷಣ ಯುವತಿಯ ಪಾಲಕರಿಗೆ ವಿಷಯ ತಿಳಿಸಿದ್ದಾರೆ.
ಶರ್ಮಿತಾ ಪಾಲಕರು ಬಂದ ನಂತರ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಮೃತದೇಹದ ಬಳಿ ಮರಣಪತ್ರ ಲಭ್ಯವಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ ಎನ್ನಲಾಗಿದೆ.
ಬೆಳ್ಳಂಬೆಳಗ್ಗೆ ವಿದ್ಯುತ್ ಶಾಕ್‌ಗೆ 8ರ ಬಾಲಕ ಬಲಿ
ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ವಿದ್ಯುತ್ ಶಾಕ್‌ಗೆ (Electrocution) ಬಾಲಕನೊಬ್ಬ (Boy) ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿಯಲ್ಲಿ (Manchenahalli) ನಡೆದಿದೆ.
ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಈ ದುರ್ಘಟನೆ ನಡೆದಿದ್ದು, ಮೀನಾಕ್ಷಿ-ಮೂರ್ತಿ ದಂಪತಿಗಳ ಪುತ್ರ ನಾಗೇಂದ್ರ (8) ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾನೆ. ರಸ್ತೆ ದಾಟಲು ಹೋದ ಸಂದರ್ಭ ಟ್ರಾನ್ಸ್‌ಫಾರ್ಮರ್ (Transformer) ಗ್ರೌಂಡಿಂಗ್ ವೈರ್‌ನಿಂದ ವಿದ್ಯುತ್ ಶಾಕ್ ತಗುಲಿ ಬಾಲಕ ಕೊನೆಯುಸಿರೆಳೆದಿದ್ದಾನೆ.
ರಸ್ತೆ ಅಗಲೀಕರಣಕ್ಕಾಗಿ ಟ್ರಾನ್ಸ್‌ಫಾರ್ಮರ್ ಬಳಿ ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆದ ಪರಿಣಾಮ ಹೊಂಡದಲ್ಲಿ ನೀರು ಶೇಖರಣೆಯಾಗಿದೆ. ರಸ್ತೆ ದಾಟಲು ಟ್ರಾನ್ಸ್‌ಫಾರ್ಮರ್ ಬದಿಯಲ್ಲಿ ಹೋಗುವಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.