ಹುಲಿ ಉಗುರು ಲಾಕೆಟ್ ಪ್ರಕರಣ ; ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು!
ಬೆಂಗಳೂರು: ಹುಲಿ ಉಗುರು (Tiger Claws) ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್‌ಗೆ (Varthur Santhosh) ಜಾಮೀನು ಮಂಜೂರಾಗಿದೆ.
2ನೇ ಎಸಿಜೆಎಂ ನ್ಯಾಯಾಲಯ 4 ಸಾವಿರ ನಗದು ಶ್ಯೂರಿಟಿ ಅಥವಾ ಒಬ್ಬ ವ್ಯಕ್ತಿಯ ಶ್ಯೂರಿಟಿ, ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಮೀನು (Bail) ಮಂಜೂರು ಮಾಡಿದೆ.
ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಂತೋಷ್ ಇಂದು ಸಂಜೆ 7 ಗಂಟೆ ಬಳಿಕ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಹಳ್ಳಿಕಾರ್ ರಾಸುಗಳ (Hallikar Cow) ರಕ್ಷಣೆಯ ಮೂಲಕ ಗುರುತಿಸಿಕೊಂಡಿದ್ದ ಸಂತೋಷ್ ಅವರು 10ನೇ ಅವೃತ್ತಿಯ ಬಿಗ್ ಬಾಸ್ (Bigg Boss) ಮನೆಗೆ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು.
ಕುತ್ತಿಗೆಯಲ್ಲಿ ಸಂತೋಷ್ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿದ್ದರು.
ವರ್ತೂರು ಸಂತೋಷ್ ಅವರು ಹಲವು ಪ್ರಾಣಿಗಳನ್ನು ಸಾಕಿದ್ದು, ಹಳ್ಳಿಕಾರ್ ರಾಸು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಹುಲಿ ಉಗುರಿನ ಕಂಟಕ – ಅರಣ್ಯಾಧಿಕಾರಿ ಅಮಾನತು
ಚಿಕ್ಕಮಗಳೂರು: ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಕಳಸದ (Kalasa) ಅರಣ್ಯಾಧಿಕಾರಿಯೊಬ್ಬರು ಹುಲಿ ಉಗುರು (Tiger Claw) ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಅಮಾನತುಗೊಂಡಿದ್ದಾರೆ.
ಕಳಸದ ಡಿಆರ್‍ಎಫ್‍ಓ ದರ್ಶನ್ ಅಮಾನತಾದ ಅಧಿಕಾರಿಯಾಗಿದ್ದಾರೆ. ಇವರ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿತ್ತು. ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ (Forest Department) ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಧಿಕಾರಿ ವಿರುದ್ಧ, ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಲಾಗಿತ್ತು. ಅಲ್ಲದೇ ವನ್ಯ ಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿಎಫ್‍ಓ ನಂದೀಶ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಅರೆನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದರು.