ಹುಲಿ ಉಗುರು ಪ್ರಕರಣ ; ಅಮಾನತುಗೊಂಡಿದ್ದ ಕಳಸದ ಡಿಆರ್‌ಎಫ್‌ಓ ಬಂಧನ!
ಚಿಕ್ಕಮಗಳೂರು: ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಕಳಸದ (Kalasa) ಅರಣ್ಯಾಧಿಕಾರಿಯೊಬ್ಬರು ಹುಲಿ ಉಗುರು (Tiger Claw) ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು. ಈಗ ಅವರನ್ನು ಎನ್‌ಆರ್‌ಪುರದಲ್ಲಿ ಬಂಧಿಸಲಾಗಿದೆ.
ಕಳಸದ ಡಿಆರ್‌ಎಫ್‌ಓ ದರ್ಶನ್ ಅವರನ್ನು ಬೆಳಗ್ಗೆ ಅಮಾನತು ಮಾಡಲಾಗಿತ್ತು. ಇವರ ವಿರುದ್ಧ ಹುಲಿ ಉಗುರು ಧರಿಸಿದ್ದ ದೂರು ಬಂದಿತ್ತು. ಈ ಬಗ್ಗೆ ತನಿಖೆಗೆ ಹಾಜರಾಗುವಂತೆ ಇಲಾಖೆ (Forest Department) ಸೂಚಿಸಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು.
ಅಧಿಕಾರಿ ವಿರುದ್ಧ, ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ದೂರು ನೀಡಲಾಗಿತ್ತು. ಅಲ್ಲದೇ ವನ್ಯ ಜೀವಿ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪದ ಡಿಎಫ್‍ಓ ನಂದೀಶ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಈಗ ಅಧಿಕಾರಿಯ ಬಂಧನವಾಗಿದೆ.
ಅರೆನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದರು.
ರಾಜ್ಯ ಸರ್ಕಾರದ್ದು ಹುಲಿ ಉಗುರು ಎಂಬ ಸದಾರಮೆ ನಾಟಕ: ಸಿ.ಟಿ. ರವಿ ವಾಗ್ದಾಳಿ
ಚಿಕ್ಕಮಗಳೂರು: ರಾಜ್ಯ ಸರ್ಕಾರದ್ದು ಹುಲಿ ಉಗುರು (Tiger Claw Row) ಎಂಬ ಸದಾರಮೆ ನಾಟಕ. ರಾಜ್ಯದ ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಹುಲಿ ಉಗುರಿನ ನಾಟಕವಾಡುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ. ರವಿ (C.T.Ravi) ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸಿ.ಟಿ.ರವಿ ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಐಟಿ ದಾಳಿಯಲ್ಲಿ ಪತ್ತೆಯಾದ ಕೋಟ್ಯಂತರ ಹಣದ ಚರ್ಚೆಯ ದಾರಿ ತಪ್ಪಿಸುವ ನಾಟಕವನ್ನು ಕಾಂಗ್ರೆಸ್ ಆಡಿದೆ. ಜನರ ಆಕ್ರೋಶಕ್ಕೆ ವಿರಾಮ ಹಾಕಲು, ಕಮಿಷನ್ ಕಲೆಕ್ಟರ್ (CM), ಡೆಪ್ಯೂಟಿ ಕಮಿಷನ್ ಕಲೆಕ್ಟರ್ (DCM) ಅವರ ಹುಲಿ ಉಗುರು ನಾಟಕ ಇದು ಎಂದು ಕಾಲೆಳೆದಿದ್ದಾರೆ.
ಜನ ನೂರಾರು ವರ್ಷಗಳಿಂದ ಹುಲಿ ಉಗುರನ್ನ ಆಭರಣವಾಗಿ ಧರಿಸಿದ್ದಾರೆ. ಇಲಾಖೆಗೆ ಕಾಣದ್ದೇನು ಅಲ್ಲ. ಈಗ ಸರ್ಕಾರದ ವೈಫಲ್ಯ, ಬೋಗಸ್ ಭರವಸೆಗಳಿಗೆ ಜನ ಆಕ್ರೋಶಿತರಾಗಿದ್ದಾರೆ. ರೈತರಿಗೆ ವಿದ್ಯುತ್ ಪೂರೈಸುತ್ತಿಲ್ಲ, ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆ ವೈಫಲ್ಯ, ಶಾಸಕರು ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ, ಪಂಚರಾಜ್ಯ ಚುನಾವಣೆಗೆ ನಡೆಸಿದ ಕಲೆಕ್ಷನ್ ಐಟಿ ಇಲಾಖೆ ಪಾಲು, ಸರ್ಕಾರಕ್ಕೆ ಜನರ ಎದುರು ತಲೆಯೆತ್ತಿ ನಡೆಯಲಾಗುತ್ತಿಲ್ಲ ಎಂದು ಕುಟುಕಿದ್ದಾರೆ.
ಒಮ್ಮೆ ನಿಮ್ಮ ಮಂತ್ರಿಮಂಡಲದ ಒಳಗೆ ಇಣುಕಿ ನೋಡಿ, ಕಾಡು ಪ್ರಾಣಿ ಬಂಧನದಲ್ಲಿರಿಸಿ ಹತ್ಯೆ ಮಾಡಿದವರು ಸಿಕ್ಕಿಯಾರು. ಜನಸಾಮಾನ್ಯರಿಗೆ FSL ವರದಿ ಬರುವುದಕ್ಕೆ ಮುಂಚೆಯೇ ಬಂಧನ. ಸೆಲೆಬ್ರಿಟಿಗಳಿಗೆ ನೋಟಿಸ್… ಇದೆಲ್ಲವೂ ಈ ನಾಟಕದ ಭಾಗವಲ್ಲವೇ? ಇದು ನಿಮ್ಮ ಸರ್ಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದಡಿ ವರ್ತೂರು ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಪೆಂಡೆಂಟ್ ಧರಿಸಿದ್ದ ಆರೋಪ ಸ್ಯಾಂಡಲ್‌ವುಡ್ ನಟರಾದ ದರ್ಶನ್, ಜಗ್ಗೇಶ್ ಮೇಲೂ ಕೇಳಿಬಂದಿತ್ತು. ಈ ವೇಳೆ ಅರಣ್ಯಾಧಿಕಾರಿಗಳು ನಟ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟಿಸ್ ಕೊಟ್ಟಿದ್ದರು. ಪ್ರಕರಣ ಸಂಬಂಧ ಈಗ ವರ್ತೂರು ಸಂತೋಷ್‌ಗೆ ಜಾಮೀನು ನೀಡಲಾಗಿದೆ.