ಕುರ್ಚಿ ಫೈಟ್ ನಡುವೆ ಶೋಭಾ ಕರಂದ್ಲಾಜೆಗೆ ಟಿಕೆಟ್; ಕಾಂಗ್ರೆಸ್ ಸೇರ್ತಾರಾ ಡಿ ವಿ ಸದಾನಂದ ಗೌಡ?
ಲೋಕಸಭಾ ಚುನಾವಣೆ(Lok Sabha Election 2024)ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು , ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬ್ರಿಜೇಶ್ ಚೌಟ ಹೆಸರು ಪ್ರಕಟವಾಗಿದ್ದು, ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈ ತಪ್ಪಿದೆ. ಇನ್ನು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿದ್ದು, ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರ ನೀಡಲಾಗಿದೆ.
ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಅಭಿಯಾನಕ್ಕೆ ಜಯ ಸಿಕ್ಕಿದೆಯಾದ್ರೂ , ಮೀನುಗಾರರ ಸಮೂದಾಯಕ್ಕೆ ಟಿಕೆಟ್ ಬೇಡಿಕೆ ಇಟ್ಟಿದ್ದ ಪ್ರಮೋದ್ ಮದ್ವರಾಜ್ ಅವರಿಗೆ ಹಿನ್ನಡೆ ಉಂಟಾಗಿದೆ. ಬೆಂಗಳೂರು ಉತ್ತರದಲ್ಲಿ ಕೊನೆಯ ಕ್ಷಣದಲ್ಲಿ ನಾನೂ ಆಕಾಂಕ್ಷಿ ಎಂದು ಟಿಕೆಟ್ ಪಡೆಯಲು ಮುಂದಾಗಿದ್ದ ಡಿ.ವಿ.ಸದಾನಂದ ಗೌಡರನ್ನು ಕಡೆಗಣಿಸಿದ ಹೈ ಕಮಾಂಡ್ ಶೋಭಾ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಿದೆ.
ಡಿವಿ ಸದಾನಂದ ಗೌಡರಿಗೆ ಟಿಕೆಟ್ ತಪ್ಪಿದ ವಿಷಯದ ಬೆನ್ನಿಗೆ ಕಾಂಗ್ರೆಸ್ ಕರೆ ಮಾಡಿದ್ದು ಡಿವಿಎಸ್ ಅವರನ್ನು ಪಕ್ಷಕ್ಕೆ ಸೇರುವಂತೆ ಅಹ್ವಾನ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಈ ಬಗ್ಗೆ ಪ್ರತಿಕ್ರೀಯಿಸಿರುವ ಡಿವಿಎಸ್ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಹಾರಿಕೆ ಸುದ್ದಿಯನ್ನು ಹಬ್ಬುವವರು ದೇಶದ್ರೋಹಿಗಳು ಎಂದಿದ್ದಾರೆ.
ನಿನ್ನೆ ಟಿಕೆಟ್ ನೀಡಲು ಗುಡುಗಿದ ಸದಾನಂದ ಗೌಡ
ನನಗೆ ಟಿಕೆಟ್ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಿಎಂ, ಹಾಲಿ ಸಂಸದ ಸದಾನಂದ ಗೌಡ ಬಿಜೆಪಿ ಹೈಕಮಾಂಡಿಗೆ ಎಚ್ಚರಿಕೆ ನೀಡಿದ್ದರು. ಒಕ್ಕಲಿಗರು ಹಾಗೂ ಉಳಿದ ಸಮುದಾಯದವರ ಸಹಮತ ಪಡೆದು ನಾನು ಗೆದ್ದಿದ್ದೇನೆ. ಮಾಜಿ ಸಿಎಂ ಆಗಿ, ಕೇಂದ್ರದ ಮಾಜಿ ಸಚಿವನಾಗಿ ನನಗೆ ಟಿಕೆಟ್ ನೀಡದೆ ಇದ್ದರೆ ಆಗುವ ಪರಿಣಾಮದ ಬಗ್ಗೆ ನಾನು ಹೇಳುವುದಕ್ಕಿಂತಲೂ ಪಕ್ಷ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸದಾನಂದ ಗೌಡ ಹೇಳಿದ್ದರು.
ನಾನು ನೇರವಾಗಿದ್ದೇನೆ. ಒತ್ತಾಯಕ್ಕೆ ಒಪ್ಪಿಕೊಂಡು ಮತ್ತೆ ಬಂದಿದ್ದೇನೆ. ಅದನ್ನು ಕೇಂದ್ರದವರು ಗೌರವಿಸುವ ವಿಶ್ವಾಸವಿದೆ. ಬೆಂಗಳೂರು ಉತ್ತರ ಒಕ್ಕಲಿಗರ ಪ್ರಾಬಲ್ಯದ ಪ್ರದೇಶ ಎಂದು ಸೂಚ್ಯವಾಗಿ ಹೇಳಿದ್ದಾರೆ.
ನಾವು ಪಕ್ಷದಲ್ಲಿ ಈ ರೀತಿ ಗೊಂದಲ ಮಾಡಿಕೊಂಡರೆ ಖಂಡಿತ ಹಿನ್ನಡೆಯಾಗುತ್ತದೆ.ನನಗೆ ಟಿಕೆಟ್ ಕೊಡದೆ ಇದ್ದರೆ ಮುಂದೇನು ಎಂಬ ಪ್ರಶ್ನೆಗೆ ಈಗ ಪ್ರತಿಕ್ರಿಯೆ ನೀಡುವುದಿಲ್ಲ. ಒಕ್ಕಲಿಗ ಸಂಸದರು ಇರುವ ಕ್ಷೇತ್ರಗಳಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ. ನನಗೆ ನೂರಾರು ಜನರು ಈ ವಿಚಾರ ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜವಂಶಸ್ಥ ಯದುವೀರ್ ಅವರನ್ನು ಪಕ್ಷಕ್ಕೆ ಕರೆತರಲು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಿ, ಮೈಸೂರಿನಲ್ಲಿ ಇದು ಹೊಸದಲ್ಲ. ಬೇರೆ ರಾಜ್ಯಗಳಲ್ಲೂ ರಾಜವಂಶಸ್ಥರನ್ನು ಕರೆ ತಂದಿದ್ದಾರೆ. ಆದರೆ ಪ್ರತಾಪಸಿಂಹ ಹಾಗೂ ಅನಂತ ಕುಮಾರ್ ಹೆಗಡೆಯವರಿಗೆ ಅವರ ಮಾತುಗಳೇ ಜಾಸ್ತಿಯಾಯಿತು ಎಂದರು.
ಬೆಂಗಳೂರು ಉತ್ತರಕ್ಕೆ ನೂರಕ್ಕೆ ನೂರು ನನ್ನದೊಂದೇ ಹೆಸರಿತ್ತು. ಕಾರ್ಯಕರ್ತರು ಒಮ್ಮತದ ಅಭಿಪ್ರಾಯ ಕೊಟ್ಟ ಬಳಿಕ ಕೇಂದ್ರದವರು ಅದಕ್ಕೆ ಮಣೆ ಹಾಕಬೇಕು. ಇಲ್ಲವಾದರೆ ಕಾರ್ಯಕರ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಹೇಳಿದರು.