ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು
ವಿಜಯಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣ ಸಮೀಪದ ಚಿಕ್ಕನಹಳ್ಳಿ ಅಮಾನಿಕೆರೆಯಲ್ಲಿ ಶನಿವಾರ ಈಜಲು ಹೋಗಿದ್ದ ಮೂವರು ಮಂದಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಕೆರೆಕೋಡಿ ರಸ್ತೆ ಹಾಗೂ ಶಿಡ್ಲಘಟ್ಟ ರಸ್ತೆಯಲ್ಲಿ ವಾಸವಾಗಿದ್ದ ಕಾರ್ತಿಕ್(15), ಗುರುಪ್ರಸಾದ್(16), ಧನುಷ್(6), ಮೃತ ವಿದ್ಯಾರ್ಥಿಗಳು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಓದುತ್ತಿದ್ದರು.
ಶನಿವಾರ ಶಾಲೆ ಮುಗಿಸಿಕೊಂಡು ಮನೆಗೆ ಬಂದು ಬ್ಯಾಗ್ ಗಳನ್ನು ಮನೆಯಲ್ಲಿಟ್ಟು, ಸೈಕಲ್ ಗಳಲ್ಲಿ ಹೊರಗೆ ಹೋದವರು, ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮಕ್ಕಳು ಬಾರದೆ ಇರುವುದನ್ನು ಗಮನಿಸಿದ ಪೋಷಕರು ಎಲ್ಲ ಕಡೆ ಹುಡುಕಾಡಿ, ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಕೆರೆಯಲ್ಲಿ ಸೈಕಲ್ ಗಳು ಪತ್ತೆಯಾಗಿದ್ದು, ನೀರಿನಲ್ಲಿ ಮೃತದೇಹಗಳು ಪತ್ತೆಯಾಗಿವೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸಹಾಯದೊಂದಿಗೆ ಮೂರು ಮಕ್ಕಳ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ, ವಿಜಯಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ಬಂದಿದ್ದ ಮೃತ ವಿದ್ಯಾರ್ಥಿಗಳ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.
ಖೋ ಖೋ ಆಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿ ಸಾವು:
ಮೈಸೂರು: ಖೋಖೋ ಆಟದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ. 13 ವರ್ಷದ ಶಶಾಂಕ್ ಮೃತ ವಿದ್ಯಾರ್ಥಿಯಾಗಿದ್ದು, ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಗ್ರಾಮದ ಎಚ್.ಎಸ್ ಪಾಪಣ್ಣ ಮತ್ತು ಕುಮಾರಿ ದಂಪತಿ ಪುತ್ರನಾಗಿದ್ದ ಶಶಾಂಕ್, ಶಾಲಾ ಅವಧಿ ಮುಗಿದ ಬಳಿಕ ಖೋಖೋ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ.
ತಕ್ಷಣ ಎಚ್ಚೆತ್ತ ಇತರೇ ವಿದ್ಯಾರ್ಥಿಗಳು ಆತನನ್ನು ಎಚ್ಡಿ ಕೋಟೆ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ವಿದ್ಯಾರ್ಥಿಗಳು ಮೈದಾನದಲ್ಲಿ ಖೋಖೋ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಏಕಾಏಕಿ ಕುಸಿದು ಬಿದ್ದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.