ಮೂರು ಮುತ್ತುಗಳು ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ!
ಬೆಂಗಳೂರು: ರೂಪಕಲಾ ನಾಟಕ ತಂಡದ ʻಮೂರು ಮುತ್ತುಗಳುʼ ನಾಟಕ (Mooru Muttugalu Nataka) ಖ್ಯಾತಿಯ ಅಶೋಕ್ ಶಾನಭಾಗ್ (ashok shanbhag) ವಿಧಿವಶರಾಗಿದ್ದಾರೆ. ಕೆಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಶೋಕ್ ಶಾನಭಾಗ್ ಅವರು, ಡಿ.8ರಂದು ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ಮುತ್ತು ನಾಟಕ ಮಾತ್ರವಲ್ಲದೇ ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಲ್ಲಿ ಅಶೋಕ್ ಶಾನಭಾಗ್ ನಟಿಸಿದ್ದರು.
ಮೂರು ಮುತ್ತುಗಳು ನಾಟಕ ಕಳೆದ 26 ವರ್ಷಗಳಿಂದ ಸುಮಾರು 1900 ಪ್ರದರ್ಶನ ಕಂಡಿದ್ದು, ಪ್ರತಿವರ್ಷ 50-60 ಪ್ರದರ್ಶನ ಕಾಣುತ್ತಿತ್ತು. ಅದರಲ್ಲಿಯೂ ಅಶೋಕ್ ಶಾನಭಾಗ್ ಅವರ ಕಾಮಿಡಿಯಂತೂ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿತ್ತು. ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ `ಮಜಾ ಟಾಕೀಸ್’ನಲ್ಲೂ ಅಶೋಕ್ ಶಾನಭಾಗ್ ಭಾಗವಹಿಸಿದ್ದರು. ಕುಂದಾಪುರದ `ಕಾಮಿಡಿ ಕಿಂಗ್’ ಎಂದೇ ಪ್ರಸಿದ್ಧಿ ಪಡೆದ ಅಶೋಕ್ ಶಾನಭಾಗ್ ಅವರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಅಶೋಕ್ ಶಾನಭಾಗ್ ಅವರ ಅಂತ್ಯಕ್ರಿಯೆ ಇಂದು(ಡಿಸೆಂಬರ್ 09) ಶನಿವಾರ ಕುಂದಾಪುರದಲ್ಲಿ ನಡೆಯಲಿ ಎಂದು ಮೂಲಗಳು ತಿಳಿಸಿವೆ. ಮೂರು ಮುತ್ತುಗಳು ನಾಟಕದಲ್ಲಿ ಕೆಲವು ಬದಲಾವಣೆಗಳನ್ನೂ ತಂದಿದ್ದರೂ ಸಹ, ಎಲ್ಲಿಯೂ ತನ್ನ ಬೇಡಿಕೆಯನ್ನು ಕಳೆದುಕೊಂಡಿರಲಿಲ್ಲ. ಇತ್ತೀಚೆಗೆ ಅಶೋಕ್ ಅವರು ಯುಟ್ಯೂಬ್‌ನಲ್ಲಿ ಹಲವು ವಿಡಿಯೊಗಳನ್ನು ಹಂಚಿಕೊಂಡಿದ್ದರು.
ಭಾರತ ಕಂಡ ಶ್ರೇಷ್ಠ ಕಲಾವಿದೆ ಲೀಲಾವತಿ: ನಟ ಉಪೇಂದ್ರ
ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ (Leelavathi) ನಿಧನಕ್ಕೆ ಉಪೇಂದ್ರ ಅವರು (Upendra) ಸಂತಾಪ ಸೂಚಿಸಿದ್ದಾರೆ. ಇದೀಗ ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಲೀಲಾವತಿ ಅವರು ಕನ್ನಡ ಚಿತ್ರರಂಗದ ಶ್ರೇಷ್ಠ ನಟಿ ಎಂದು ಉಪೇಂದ್ರ ಮಾತನಾಡಿದ್ದಾರೆ. ಹಿರಿಯ ನಟಿಯ ನಿಧನದ ಬಗ್ಗೆ ಭಾವುಕರಾಗಿದ್ದಾರೆ.
ಲೀಲಾವತಿ ಅವರು ಭಾರತಕ್ಕೆ ಗೊತ್ತು ಅವರೆಂತಹ ಶ್ರೇಷ್ಠ ಕಲಾವಿದೆ ಅಂತ. ಅವರನ್ನು ಇಂದು ಕಳೆದುಕೊಂಡಿದ್ದೀವಿ. ತಾನು ಹೋಗ್ತೀನಿ ಅಂತ ಅವರಿಗೆ ಮೊದಲೇ ಗೊತ್ತಿತ್ತು ಅನಿಸುತ್ತೆ. ಆಸ್ಪತ್ರೆ ಕಟ್ಟಿಸೋದು ಸೇರಿದಂತೆ ಸಾಕಷ್ಟು ಸಮಾಜ ಸೇವೆ ಮಾಡಿಯೇ ಹೋಗಿದ್ದಾರೆ. ವಿನೋದ್ ರಾಜ್ ಹೇಳುತ್ತಿದ್ದರು ಅವರಿಗೆ ತುಂಬಾ ಕನಸಿತ್ತು ಅಂತ. ಅದನ್ನ ಈಡೇರಿಸುತ್ತೇನೆ ಎಂದು ಕೂಡ ಹೇಳಿದ್ದರು. ಅದನ್ನೆಲ್ಲಾ ಪೂರೈಸುವ ಶಕ್ತಿ ದೇವರು ಅವರಿಗೆ ಕೊಡಲಿ ಅಂತ ಉಪೇಂದ್ರ ಮಾತನಾಡಿದ್ದಾರೆ.
ಬೆಳಿಗ್ಗೆಯಿಂದ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಕಲಾವಿದರು, ಆಪ್ತರು, ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇಂದು ಸರಕಾರಿ ಸಕಲ ಗೌರವದೊಂದಿಗೆ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ತೋಟದ ಮನೆಯಲ್ಲಿ ಮಧ್ಯಾಹ್ನ 3:30ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದೆ.
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.