ನದಿಗೆ ಸ್ನಾನಕ್ಕಿಳಿದ ಮೂವರು ಸ್ನೇಹಿತರು ನೀರುಪಾಲು
ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಳೆ ಕೂಡಿಗೆ ಬಳಿ ನಡೆದಿದೆ.
ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು (23), ಕಣಿವೆಯ ಹಕ್ಕೆ ಸಚಿನ್ (25) ಹಾಗೂ ಮುಳ್ಳುಸೋಗೆ ಜನತಾಕಾಲನಿ ವಿನೋದ್(25) ಮೃತ ದುರ್ದೈವಿಗಳಾಗಿದ್ದಾರೆ.
ಐವರು ಸ್ನೇಹಿತರು ಕಾವೇರಿ ನದಿ ಬಳಿ ಕಾರು ನಿಲ್ಲಿಸಿ ಸ್ನಾನಕ್ಕೆ ತೆರಳಿದ ಸಂದರ್ಭ ಓರ್ವ ಆಳವಾದ ಪ್ರದೇಶದಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ತೆರಳಿದ ಮತ್ತೋರ್ವ ಮುಳುಗುವುದನ್ನು ಕಂಡು ಅವನನ್ನು ರಕ್ಷಿಸಲು ಇನ್ನೊಬ್ಬ ಸ್ನೇಹಿತ ಮುಂದಾದ ಸಂದರ್ಭ ಮೂವರೂ ಕೂಡ ಮುಳುಗಿ ಮೃತಪಟ್ಟಿದ್ದಾರೆ.
ವಿಷಯ ಅರಿತು ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮತ್ತು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಶೋಧ ಕಾರ್ಯ ನಡೆಸಿದರು. ಈ ವೇಳೆ ಶ್ರೀನಿವಾಸ್ ದೇಹ ಪತ್ತೆಯಾಗಿದ್ದು ಕುಶಾಲನಗರ ಆಸ್ಪತ್ರೆಗೆ ಸಾಗಿಸಿದ ಸಂದರ್ಭ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಇನ್ನುಳಿದ ಇಬ್ಬರ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಘಟನೆ ಮಧ್ಯಾಹ್ನದ ವೇಳೆ ನಡೆದಿದ್ದು, ಕಡು ಕತ್ತಲಿನಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಟಾರ್ಚ್ ಬಳಸಿಕೊಂಡು ಶೋಧ ಕಾರ್ಯ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಗಂಗಾಧರಪ್ಪ, ತಹಶೀಲ್ದಾರ್ ಕಿರಣ್ ಗೌರಯ್ಯ, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಕೆ.ಜಿ ರಾಜೇಶ್, ಸಹಾಯಕ ಅಧಿಕಾರಿ ಚಿಕ್ಕೇಗೌಡ, ನಾಯಕ ಲತೀಶ್, ಸಿಬ್ಬಂದಿಗಳಾದ ಶಿವಾನಂದ, ಸಂಗಮೇಶ್, ಶಶಿ, ಉದಯ ಅವರುಗಳು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.