50 ವರ್ಷದಿಂದ ಕೇವಲ ತಂಪು ಪಾನೀಯ, ನೀರು ಕುಡಿದೇ ಬದುಕಿದ 75 ವಯಸ್ಸಿನ ಈ ಅಜ್ಜಿ...!
ವಿಯೆಟ್ನಾಂ: ಉತ್ತಮ ಆರೋಗ್ಯಕ್ಕೆ ಸರಿಯಾದ, ಪೋಷಕಾಂಶಯುಕ್ತ ಆಹಾರ ಮುಖ್ಯ ಎನ್ನುತ್ತದೆ ವೈದ್ಯ ಲೋಕ. ಅದಕ್ಕಾಗಿ ದ್ರವ ರೂಪದ ಆಹಾರದ ಜತೆಗೆ ಘನ ಆಹಾರವನ್ನೂ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಆದರೆ ವೈದ್ಯಲೋಕವನ್ನೇ ಅಚ್ಚರಿಗೆ ದೂಡಿ ಇಲ್ಲೊಬ್ಬರು ಸುಮಾರು 50 ವರ್ಷಗಳಿಂದ ಕೇವಲ ನೀರು ಮತ್ತು ತಂಪು ಪಾನೀಯ (Cold drinks) ಕುಡಿದೇ ಬದುಕುತ್ತಿದ್ದಾರೆ. ಅದೂ ಅವರು ಈ 75ರ ಇಳಿವಯಸ್ಸಿನಲ್ಲೂ ಆರೋಗ್ಯವಂತರಾಗಿದ್ದಾರೆ ಎನ್ನುವುದು ವಿಶೇಷ (Medical Miracle). ಯಾರು ಈ ವೃದ್ಧೆ? ಏನಿವರ ಹಿನ್ನೆಲೆ ಎನ್ನುವುದರ ವಿವರ ಇಲ್ಲಿದೆ.
ವಿಯಟ್ನಾಂನ ಬುಯಿ ಲೋಯಿ ಎಂಬ 75ರ ಹರೆಯದ ಅಜ್ಜಿಯೇ ವೈದ್ಯ ಲೋಕಕ್ಕೆ ಸವಾಲಾಗಿರುವವರು. ಅವರಿಗೆ ಯಾವುದೇ ಘನ ಆಹಾರ ತಿನ್ನಬೇಕೆಂದು ಅನಿಸುವುದೇ ಇಲ್ಲವಂತೆ. ಬರೀ ನೀರು, ಸಕ್ಕರೆಯಂಶವಿರುವ ತಂಪು ಪಾನೀಯವಷ್ಟೇ ಅವರ ಆಹಾರ.
ಕಾರಣವೇನು?
ಬುಯಿ ಲೋಯಿ ಅವರ ಈ ವಿಚಿತ್ರ ವರ್ತನೆಯ ಹಿಂದೆ ಬಲವಾದ ಕಾರಣವಿದೆ. ಆಗ ಬುಯಿ ಲೋಯಿ ಅವರಿಗೆ ಸುಮಾರು 25 ವರ್ಷವಾಗಿತ್ತು. 50 ವರ್ಷಗಳ ಹಿಂದೆ ಅವರು ಹಾಗೂ ಮತ್ತೊಬ್ಬ ಮಹಿಳೆ ಗಾಯವಾದ ಸೈನಿಕರಿಗೆ ಚಿಕಿತ್ಸೆ ನೀಡಲು ಬೆಟ್ಟ ಹತ್ತುತ್ತಿದ್ದರು. ಆಗ ಸಿಡಿಲು ಬಡಿದು ಬುಯಿ ಲೋಯಿ ಪ್ರಜ್ಞೆ ತಪ್ಪಿತ್ತು. ಕೆಲವು ಸಮಯದ ಬಳಿಕ ಎಚ್ಚರವಾದ ಮೇಲೆ ಗೆಳತಿ ಜ್ಯೂಸ್ ಕುಡಿಸಿದ್ದರು. ಆ ಬಳಿಕ ಬುಯಿ ಲೋಯಿ ಅವರ ಜೀವನ ಶೈಲಿಯೇ ಬದಲಾಯಿತು. ನಂತರ ಅವರಿಗೆ ಯಾವುದೇ ಘನ ಆಹಾರ ತಿನ್ನಲು ಅಷ್ಟು ಇಷ್ಟವಾಗುತ್ತಿರಲಿಲ್ಲವಂತೆ. ಸ್ವಲ್ಪ ಸಮಯ ಹಣ್ಣು, ಮತ್ತಿತರ ಆಹಾರ ಸೇವಿಸಿದರು. ಆದರೆ 1970ರಿಂದ ಹಣ್ಣು ಹಾಗೂ ಇತರ ಘನ ಆಹಾರ ಸೇವಿಸುವುದನ್ನು ಸಹ ಸಂಪೂರ್ಣ ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೀಗ ಅವರ ಮನೆಯ ಫ್ರಿಡ್ಜ್ ತುಂಬಾ ಬರೀ ನೀರು ಹಾಗೂ ಜ್ಯೂಸ್‌ಗಳಿವೆ. ಅದರಲ್ಲೂ ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಈ ಡಯಟ್‌ನಿಂದಾಗಿ ಹೆರಿಗೆಯಾದಾಗ ಮಕ್ಕಳಿಗೆ ಹಾಲುಣಿಸಲು ಕೂಡ ಅವರಿಗೆ ಸಾಧ್ಯವಾಗಲಿಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ. ಸದ್ಯ ಈ ಬಗ್ಗೆ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೇವಲ ದ್ರವ ಆಹಾರದಿಂದಲೇ ಆರೋಗ್ಯವಾಗಿರುವುದು ಹೇಗೆ ಎನ್ನುವುದು ಬಹು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
Israel Palestine War: 5 ಒತ್ತೆಯಾಳುಗಳ ಸಾವು; ಕದನ ವಿರಾಮ ಅಂತ್ಯ, ಮತ್ತೆ ಹಮಾಸ್ ಮೇಲೆ ಇಸ್ರೇಲ್ ಬಾಂಬ್ ಮಳೆ
ಟೆಲ್ ಅವಿವ್: ಇಸ್ರೇಲ್- ಹಮಾಸ್ ಕದನ ವಿರಾಮ (ceasefire) ಕೊನೆಗೊಂಡಿದೆ. ಹಮಾಸ್ ಉಗ್ರ ನೆಲೆಗಳ ಮೇಲೆ ಬಾಂಬ್ ದಾಳಿಯನ್ನು ಇಸ್ರೇಲ್ ಸೈನ್ಯ (Israel Palestine War) ಮುಂದುವರಿಸಿದೆ. ಮೊದಲ ದಿನದ ದಾಳಿಯಲ್ಲಿ 184 ಜನ ಸತ್ತಿರುವುದು ವರದಿಯಾಗಿದೆ. ಈ ನಡುವೆ, ಐವರು ಒತ್ತೆಯಾಳುಗಳನ್ನು (hostages) ಹಮಾಸ್ ಉಗ್ರರು ಕೊಂದಿರುವುದು ಖಚಿತವಾಗಿದೆ.
ಇಸ್ರೇಲ್ ಮತ್ತು ಹಮಾಸ್ ಭಯೋತ್ಪಾದಕರ (hamas terrorists) ನಡುವಿನ ಕದನ ವಿರಾಮವನ್ನು ವಿಸ್ತರಿಸುವ ಮಾತುಕತೆಗಳು ಸ್ಥಗಿತಗೊಂಡ ನಂತರ ಗಾಜಾದಲ್ಲಿ ಶನಿವಾರದಂದು ಎರಡನೇ ದಿನ ಹೋರಾಟ ವಿಸ್ತರಿಸಿದೆ. ಮಧ್ಯವರ್ತಿಗಳ ಪ್ರಕಾರ, ಇಸ್ರೇಲಿ ಬಾಂಬ್ ದಾಳಿಯು ಮತ್ತೊಮ್ಮೆ ಶುರುವಾಗಿದ್ದು, ಯುದ್ಧವನ್ನು ನಿಲ್ಲಿಸಲು ಇನ್ನಷ್ಟು ಕಷ್ಟಕರವಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಏಳು ದಿನಗಳ ಕದನ ವಿರಾಮ ಶುಕ್ರವಾರ ಮುಕ್ತಾಯಗೊಂಡ ಬಳಿಕ ದಕ್ಷಿಣ ಗಾಜಾ ಪಟ್ಟಿಯಲ್ಲಿರುವ ಖಾನ್ ಯುನಿಸ್‌ನ ಮೇಲಿರುವ ಆಕಾಶವನ್ನು ಇಸ್ರೇಲಿನ ರಾಕೆಟ್‌ಗಳು ಹಾಗೂ ಕ್ಷಿಪಣಿಗಳು ಬೆಂಕಿಯಿಂದ ಬೆಳಗಿದವು. ಹೊಗೆಯ ಸ್ತಂಭಗಳು ಆಕಾಶಕ್ಕೆ ಏರಿದವು. ಖಾನ್ ಯೂನಿಸ್‌ನ ಪೂರ್ವ ಭಾಗಗಳು ಭಾರೀ ಫಿರಂಗಿ ದಾಳಿಗಳಿಗೆ ತುತ್ತಾದವು.
ಗಾಜಾ ಆರೋಗ್ಯ ಅಧಿಕಾರಿಗಳ ಪ್ರಕಾರ, ಶುಕ್ರವಾರ ರಾತ್ರಿಯ ಹೊತ್ತಿಗೆ, ಇಸ್ರೇಲಿ ವೈಮಾನಿಕ ದಾಳಿಗಳು 20ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದವು. ದಾಳಿಯಲ್ಲಿ 184 ಜನ ಸತ್ತರು ಮತ್ತು ಕನಿಷ್ಠ 589 ಜನರು ಗಾಯಗೊಂಡರು.
ಇಸ್ರೇಲಿನ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ನಿವಾಸಿಗಳಿಗೆ ಬದಲಾಗಿ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ಮಾಡುವ ಷರತ್ತುಗಳನ್ನು ಹಮಾಸ್ ನಿರಾಕರಿಸಿದೆ. ಆ ಬಳಿಕ ಯುದ್ಧವಿರಾಮ ಸ್ಥಗಿತಗೊಂಡಿದೆ. ಕದನ ವಿರಾಮ ಮುರಿದುದರ ಆರೋಪವನ್ನು ಪರಸ್ಪರರ ಮೇಲೆ ಹಾಕಿದ್ದಾರೆ. ನವೆಂಬರ್ 24ರಂದು ಪ್ರಾರಂಭವಾದ ವಿರಾಮವನ್ನು ಎರಡು ಬಾರಿ ವಿಸ್ತರಿಸಲಾಯಿತು. 80 ಇಸ್ರೇಲಿಗಳು ಸೇರಿದಂತೆ 110 ಒತ್ತೆಯಾಳುಗಳ ಬಿಡುಗಡೆಗೆ ಕಾರಣವಾಯಿತು. ಇಸ್ರೇಲ್ 240 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿದೆ. ಇನ್ನಷ್ಟು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಸೂತ್ರವನ್ನು ಕಂಡುಹಿಡಿಯಲು ಮಧ್ಯವರ್ತಿಗಳು ವಿಫಲರಾದರು.
ಈ ನಡುವೆ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು ಸಂಭವಿಸಿರುವುದನ್ನು ಇಸ್ರೇಲ್ ಸೈನ್ಯ ಶುಕ್ರವಾರ ದೃಢಪಡಿಸಿದೆ. ಅವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಅವರಲ್ಲಿ ಒಬ್ಬನ ದೇಹ ಇಸ್ರೇಲ್‌ಗೆ ಮರಳಿದೆ ಎಂದು ಹೇಳಿದೆ.
“ಇತ್ತೀಚಿನ ದಿನಗಳಲ್ಲಿ, ಐಡಿಎಫ್ ಮತ್ತು ಇಸ್ರೇಲ್ ಪೊಲೀಸರು ಒತ್ತೆಯಾಳುಗಳಾದ ಎಲಿಯಾಹು ಮಾರ್ಗಲಿಟ್, ಮಾಯಾ ಗೊರೆನ್, ರೋನೆನ್ ಎಂಗಲ್ ಮತ್ತು ಆರ್ಯೆ ಜಲ್ಮನೋವಿಟ್ಜ್ ಅವರ ಸಾವಿನ ಬಗ್ಗೆ ಅವರ ಕುಟುಂಬಗಳಿಗೆ ಸೂಚನೆ ನೀಡಿದ್ದಾರೆ. ಒಫಿರ್ ತ್ಸರ್ಫಾತಿ ಎಂದು ಗುರುತಿಸಲಾದ ಐದನೇ ವ್ಯಕ್ತಿಯ ಶವವನ್ನು ಪಡೆಗಳು ಮರಳಿ ತಂದಿವೆ ಎಂದು ಅವರು ಹೇಳಿದರು. ಹಮಾಸ್ ಉಗ್ರರು ಇನ್ನೂ 136 ಒತ್ತೆಯಾಳುಗಳನ್ನು ಹೊಂದಿದ್ದಾರೆ. ಅವರಲ್ಲಿ 17 ಮಹಿಳೆಯರು ಮತ್ತು ಮಕ್ಕಳು,” ಎಂದು ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.