ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ವೈಷಮ್ಯ ಸೃಷ್ಟಿಸುವ ರಾಜಕಾರಣ ಬಹಳ ಸುಲಭ; ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ.!
ಮೈಸೂರು : 56 ಇಂಚಿನ ಎದೆ ಇರೋದಲ್ಲ ಮುಖ್ಯ. ಎದೆಯೊಳಗೆ ಹೃದಯ ಇರಬೇಕು. ಆ ಹೃದಯಕ್ಕೆ ರೈತರ, ಕಾರ್ಮಿಕರ, ವಿದ್ಯಾರ್ಥಿ ಯುವಜನರ ಪರವಾದ ತಾಯಿ ಕರುಳು ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ನಗರದ ಇಂದಿರಗಾಂಧಿ ಕಾಂಗ್ರೆಸ್ ಭವನದ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ, ಚಾಮರಾಜ, ಕೃಷ್ಣರಾಜ , ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ನಿಮ್ಮೆಲ್ಲರ ಧ್ವನಿ. ನಮ್ಮೆಲ್ಲರ ಧ್ವನಿ. ಇವರು ಗೆಲ್ಲುವುದು ಖಚಿತ. ಲಕ್ಷ್ಮಣ್ ಗೆದ್ದರೆ ನಾನು, ನೀವು ಗೆದ್ದಂತೆ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.
ನುಡಿದಂತೆ ನಡೆದು ಜನರ ಬದುಕಿಗೆ ಸ್ಪಂದಿಸುವುದು ನಮ್ಮ ಕಾಂಗ್ರೆಸ್ ಸಂಸ್ಕಾರ. ಜನರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ವಂಚಿಸುವುದು ಬಿಜೆಪಿ ಸಂಸ್ಕಾರ. ಬಿಜೆಪಿಯನ್ನು ನಿರಂತರವಾಗಿ ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬೀದಿ ಹೋರಾಟಗಳ ಮೂಲಕ ಬೆಳೆದವರು ಲಕ್ಷ್ಮಣ್ ಎಂದು ಮೆಚ್ಚುಗೆ ಸೂಚಿಸಿದರು.
ಸಾಮಾಜಿಕ ನ್ಯಾಯ, ಸಂವಿಧಾನ ರಕ್ಷಣೆ, ಸರ್ವರ ಅಭಿವೃದ್ಧಿ, ಅನ್ನ-ಅಕ್ಷರ-ಆಸರೆ-ಆರೋಗ್ಯ-ವಸತಿ ಜತೆಗೆ ಸಾಮಾಜಿಕ ಪ್ರಗತಿಗೆ ನಿಷ್ಠವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಬಿಜೆಪಿ ಇದಕ್ಕೆ ವಿರುದ್ಧವಾದ ಮಹಿಳೆಯರ, ದಲಿತರ, ಶೂದ್ರರ ಮತ್ತು ದುಡಿಯುವವರ, ಶ್ರಮಿಕರ ವಿರೋಧಿಯಾದ ಶ್ರೀಮಂತರ ಪರವಾದ ಪಕ್ಷ ಎಂದರು.
BJP ಯ ಹುಟ್ಟು ಮತ್ತು ಇತಿಹಾಸವನ್ನು ಸರಿಯಾಗಿ ಗಮನಿಸಿ. BJP ತನ್ನ ಆಚರಣೆಯಲ್ಲಿ ಬಹುಸಂಖ್ಯಾತರ ವಿರೋಧಿಯಾದ ಪಕ್ಷ. ಶೂದ್ರರು, ದಲಿತರನ್ನು ಸಮಸ್ತ ಮಹಿಳೆಯರನ್ನು ಅಕ್ಷರ ಸಂಸ್ಕೃತಿಯಿಂದ, ಶಿಕ್ಷಣದಿಂದ ದೂರ ಇಡಬೇಕು ಎನ್ನುವುದು ಮನುಸ್ಮೃತಿಯ ಸಿದ್ಧಾಂತ. ಈ ಸಿದ್ಧಾಂತ ಅಸಮಾನತೆಯನ್ನು, ಜಾತಿ ತಾರತಮ್ಯವನ್ನು ಸ್ಪಷ್ಟವಾಗಿ ಬೆಂಬಲಿಸುತ್ತದೆ. ಆದ್ದರಿಂದ ಇದು ಭಾರತದ ಬಹು ಸಂಖ್ಯಾತ ದುಡಿಯುವ ವರ್ಗಗಳ ವಿರೋಧಿಯಾದ ಪಕ್ಷ ನೆರೆದಿದ್ದ ಕಾರ್ಯಕರ್ತರಿಗೆ ಮನವರಿಕೆ ಮಾಡಿಸಿದರು.
ಮೋದಿಯವರು ಇಡಿ ದೇಶದ ಜನರಿಗೆ ಹೇಳಿದ ಸುಳ್ಳುಗಳು ನಿಮಗೆ ಗೊತ್ತಿಲ್ಲವೇ? ಮೋದಿಯವರು ಕಳೆದ 10 ವರ್ಷಗಳಲ್ಲಿ ಒಂದೇ ಒಂದು ದಿನ ಈ ದೇಶದ ನಿರುದ್ಯೋಗ ಸಮಸ್ಯೆ ಬಗ್ಗೆ, ಬೆಲೆ ಏರಿಕೆ ಬಗ್ಗೆ, ಗೊಬ್ಬರದ ಬೆಲೆ ದುಬಾರಿಯಾಗಿರುವ ಬಗ್ಗೆ ಬಾಯಿಯನ್ನೇ ಬಿಟ್ಟಿಲ್ಲ . ಪತ್ರಕರ್ತರಿಗೆ ಹೆದರಿ ಇವತ್ತಿನವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸದ ಏಕೈಕ ಪ್ರಧಾನಮಂತ್ರಿ ಎಂದು ವ್ಯಂಗ್ಯವಾಡಿದರು.
ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ವೈಷಮ್ಯ ಸೃಷ್ಟಿಸುವ ರಾಜಕಾರಣ ಬಹಳ ಸುಲಭ. ಆದರೆ, ಉದ್ಯೋಗ ಸೃಷ್ಟಿ ಮಾಡುವುದು, ಈ ದೇಶದ ಬಹುಸಂಖ್ಯಾತರ ಬದುಕಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಜನಪರವಾದ ಕಾಳಜಿ ಬೇಕು. ಅಭಿವೃದ್ಧಿ ಪಥದಲ್ಲಿ ದೇಶ ಮುನ್ನಡೆಸುವುದು ಗೊತ್ತಿರಬೇಕು. ಪ್ರಧಾನಿ ಮೋದಿಯವರಿಂದ ಇದು ಸಾಧ್ಯವಾಗಿಲ್ಲ. ಅದಾನಿ, ಅಂಬಾನಿ ಪರವಾಗಿ ಇದ್ದರೆ ಈ ದೇಶದ ದುಡಿಯುವ ವರ್ಗಗಳು, ಯುವಕ, ಯುವತಿಯರ ಭವಿಷ್ಯ ರೂಪಿಸುವುದಾದರೂ ಹೇಗೆ ? ಇದು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.