ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸುಳ್ಯದ ಕಿರಣ್ ಬುಡ್ಲೇ ಗುತ್ತು ಹೆಸರು ಮುಂಚೂಣಿಯಲ್ಲಿ; ದಕ ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ!
ಮಂಗಳೂರು:ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸುಳ್ಯದ ಕಿರಣ್ ಬುಡ್ಲೇ ಗುತ್ತು ಹೆಸರು ಮುಂಚೂಣಿಗೆ ಬಂದಿದ್ದು,ದಕ ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ ಸಂಭವಿಸಿದೆ.ಪಕ್ಷದ ವರಿಷ್ಠರು ಕಿರಣ್ ಹೆಸರನ್ನು ಗಂಭೀರವಾಗಿ ಪರಿಣಿಸುವ ಮೂಲಕ ಹೊಸ ದಾಳವನ್ನು ಉರುಳಿಸಿದ್ದು ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಹಲವಾರು ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಈ ಪಟ್ಟಿಯಲ್ಲಿ ಸುಳ್ಯದ ಯುವ ನಾಯಕ ಕಿರಣ್ ಬುಡ್ಲೇ ಗುತ್ತು ಹೆಸರು ಪಕ್ಷದ ಅಂತಿಮ ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಕಿರಣ್ ಸುಳ್ಯದವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಒಕ್ಕಲಿಗ ಕೋಟಾದ ಅಡಿಯಲ್ಲಿ ಇವರ ಹೆಸರು ಹೈಕಮಾಂಡ್ಡಿನ ಗಂಭೀರ ಪರಿಶೀಲನೆಯಲ್ಲಿ ಇದೆ ಎಂದು ತಿಳಿದುಬಂದಿದೆ. ಇದು ಅಲ್ಲದೆ ಪಟ್ಟಿಯಲ್ಲಿ ಈ ಮೊದಲು ಸೇರ್ಪಡೆಗೊಂಡಿದ್ದ ಮಾಜಿ ಸಚಿವ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಪದ್ಮರಾಜ್, ಹರೀಶ್ ಕುಮಾರ್, ಪ್ರತಿಭಾ ಕುಳಾಯಿ ಹೆಸರುಗಳು ಸಹ ಪಟ್ಟಿಗೆ ಸೇರಿದ್ದು ,ಈ ನಡುವೆ ಹೊಸದಾಗಿ ಪಟ್ಟಿಗೆ ಸೇರಿಕೊಂಡ ಕಿರಣ್ ಬುಡ್ಲೆ ಗುತ್ತು ಹೆಸರು ಒಕ್ಕಲಿಗ ಕೋಟಾದ ಅಡಿಯಲ್ಲಿ ಬಹಳಷ್ಟು ಮಂಚೂಣಿಯಲ್ಲಿ ಇದೆ ಎಂದು ತಿಳಿದುಬಂದಿದೆ. ಇದುವರೆಗೆ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡನೇ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಒಕ್ಕಲಿಗರಿಗೆ ಟಿಕೆಟ್ ನೀಡದೇ ಇರುವ ಕಾರಣದಿಂದಾಗಿ ಕಿರಣ್ ಹೆಸರನ್ನು ಈ ಬಾರಿ ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.