ಕ್ರಿಕೆಟ್ ಮತ್ತು ಫುಟ್ಬಾಲ್ ನಲ್ಲಿ ಇತಿಹಾಸ ಸೃಷ್ಟಿಸಿದ ಕ್ರಿಕೆಟ್ ಜಗತ್ತಿನ ಕ್ವೀನ್ ಎಲ್ಲಿಸ್ ಪೆರ್ರಿ ಜೀವನ ಕಥೆ...!
ಎಲ್ಲಿಸ್ ಅಲೆಕ್ಸಾಂಡ್ರಾ ಪೆರ್‍ರಿ ಸದ್ಯ ಮಹಿಳಾ ಕ್ರಿಕೆಟ್ ಜಗತ್ತಿನ ಕ್ವೀನ್, ಬರೀ ಅಂದ ನೋಡಿ ಅವರನ್ನು ಯಾರು ಕ್ವೀನ್ ಅಂದಿದ್ದಲ್ಲ, ಬದಲಾಗಿ ಕ್ರಿಕೆಟ್‌ನಲ್ಲಿ ಅವರು ಮಾಡಿರುವ ಸಾಧನೆಯೇ ಅವರಿಗೆ ಕ್ವೀನ್ ಪಟ್ಟ ತಂದುಕೊಟ್ಟಿದೆ. ಮಹಿಳಾ ಕ್ರಿಕೆಟ್‌ನ ದಂತಕಥೆ ಎನಿಸಿಕೊಳ್ಳುವ ಎಲ್ಲಿಸ್ ಪೆರ್‍ರಿ ಅವರ ಸಾಧನೆಗಳನ್ನು ನೋಡಿದ್ರೆ ಅಲ್ಲೊಂದು ದೊಡ್ಡ ಪಟ್ಟಿಯೇ ಇದೆ.
1990ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ನಗರದ ಬಳಿ ಇರುವ ವಾಹ್ರೂಂಗಾದಲ್ಲಿ ಜನಿಸಿದರು. ಶಾಲೆಯ ದಿನಗಳಲ್ಲೇ ಪೆರ್‍ರಿ ಕ್ರಿಕೆಟ್ ಫುಟ್ಬಾಲ್, ಟೆನ್ನಿಸ್, ಅಥ್ಲೆಟಿಕ್ಸ್ ಮತ್ತು ಟಚ್ ಫುಟ್ಬಾಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು.
16ನೇ ವರ್ಷದಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮತ್ತು ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದರು. ಐಸಿಸಿ ಮತ್ತು ಫಿಫಾ ವಿಶ್ವಕಪ್‌ಗಳಲ್ಲಿ ಆಡಿರುವ ಏಕೈಕ ಆಟಗಾರ್ತಿ ಎಲ್ಲಿಸ್ ಪೆರ್‍ರಿ.
ಫುಟ್ಬಾಲ್ ಮತ್ತು ಕ್ರಿಕೆಟ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಪೆರ್‍ರಿ ಬಳಿಕ ಕೇವಲ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ಬಂದಾಗ, ಕ್ರಿಕೆಟ್ ಕಡೆ ಒಲವು ತೋರಿಸಿದರು. ಅಲ್ಲಿಂದ ಅವರು ಹಿಂತಿರುಗಿ ನೋಡಲೇ ಇಲ್ಲ.
ಆಲ್‌ರೌಂಡರ್ ಆಗಿ ಪೆರ್‍ರಿ ಮಿಂಚು
ಆರಂಭದಲ್ಲಿ ವೇಗದ ಬೌಲಿಂಗ್ ಕಡೆ ಹೆಚ್ಚು ಗಮನ ಕೊಡುತ್ತಿದ್ದ ಎಲ್ಲಿಸ್ ಪೆರ್‍ರಿ ಬಳಿಕ ಬ್ಯಾಟಿಂಗ್ ಕಡೆ ಕೂಡ ಗಮನ ಹರಿಸಿದರು. ಆ ಬಳಿಕ ಸಂಪೂರ್ಣ ಆಲ್‌ರೌಂಡರ್ ಆಗಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡರು.
13 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿರುವ ಎಲ್ಲಿಸ್ ಪೆರ್‍ರಿ 22 ಇನ್ನಿಂಗ್ಸ್‌ಗಳಿಂದ 928 ರನ್ ಗಳಿಸಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ ಅಜೇಯ 213 ರನ್ ಗಳಿಸಿರುವ ಅವರು ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಜೊತೆಗೆ 39 ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.
145 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 49.94 ಸರಾಸರಿಯಲ್ಲಿ 3896 ರನ್ ಗಳಿಸಿದ್ದಾರೆ. 163 ವಿಕೆಟ್ ಪಡೆದುಕೊಂಡಿದ್ದಾರೆ. ಟಿ20 ಮಾದರಿಯಲ್ಲಿ 151 ಪಂದ್ಯಗಳಲ್ಲಿ 95 ಇನ್ನಿಂಗ್ಸ್‌ಗಳಲ್ಲಿ 31.74 ಸರಾಸರಿಯಲ್ಲಿ 1841 ರನ್ ಗಳಿಸಿದ್ದಾರೆ. 125 ವಿಕೆಟ್ ಪಡೆದುಕೊಂಡಿದ್ದಾರೆ.
2010 ರ ಮಹಿಳಾ ವಿಶ್ವ ಟಿ20 ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಪೆರ್‍ರಿ ಆಸ್ಟ್ರೇಲಿಯಾ ತಂಡಕ್ಕೆ 3 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿದ್ದರು.
2015ರಲ್ಲಿ ಮದುವೆ 5 ವರ್ಷದಲ್ಲಿ ವಿಚ್ಛೇದನ
ಅಪ್ರತಿಮ ಸುಂದರಿ ಎಲ್ಲಿಸ್ ಪೆರ್‍ರಿ 2015ರಲ್ಲಿ ತಾನು ಮೆಚ್ಚಿದ ಹುಡುಗನೊಂದಿಗೆ ಮದುವೆಯಾದರು. ಆಸ್ಟ್ರೇಲಿಯನ್ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 5 ವರ್ಷಗಳಲ್ಲೇ ಇಬ್ಬರು ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗುವ ನಿರ್ಧಾರ ಮಾಡಿದರು. 2020ರಲ್ಲಿ ಇಬ್ಬರು ಅಧಿಕೃತವಾಗಿ ವಿಚ್ಛೇದನ ಪಡೆದರು.
6 ಟಿ20 ವಿಶ್ವಕಪ್
ಎಲ್ಲಿಸ್ ಪೆರ್‍ರಿ ಆಸ್ಟ್ರೇಲಿಯಾ ತಂಡದಲ್ಲಿದ್ದಾಗ 6 ಬಾರಿ ಟಿ20 ವಿಶ್ವಕಪ್ ಗೆದ್ದಿದ್ದಾರೆ. 2 ಬಾರಿ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದಾರೆ. 1000 ರನ್ ಮತ್ತು 100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎನ್ನವ ಸಾಧನೆ ಮಾಡಿದ್ದಾರೆ. 2010ರಲ್ಲಿ ದಶಕದ ಮಹಿಳಾ ಕ್ರಿಕೆಟ್ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್‌ನಲ್ಲಿ 5000 ರನ್ ಮತ್ತು 300 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ದಾಖಲೆ ಕೂಡ ಪೆರ್‍ರಿ ಹೆಸರಿನಲ್ಲಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ 2ನೇ ಆವೃತ್ತಿಯಲ್ಲೇ ಆರ್ ಸಿಬಿ ಕಪ್ ಗೆಲ್ಲಲು ಎಲ್ಲಿಸ್ ಪೆರ್‍ರಿ ಮಹತ್ವದ ಕೊಡುಗೆ ನೀಡಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಅವರು ಆರೆಂಜ್ ಕ್ಯಾಪ್ ಕೂಡ ಪಡೆದರು.