ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!
ಐಜ್ವಾಲ್: ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಎಂಎನ್ಎಫ್ ಸೋತು ಜೋರಾಮ್ ಪೀಪಲ್ಸ್ ಮೂವ್ಮೆಂಟ್(ZPM) ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ. ಜೋರಾಮ್ ಪೀಪಲ್ಸ್ ಮೂವ್ಮೆಂಟ್(ZPM)ನ ಲಾಲ್ದುಹೋಮಾ ನೂತನ ಸಿಎಂ ಆಗಲಿದ್ದಾರೆ. ಲಾಲ್ದುಹೋಮಾ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತೆಯ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇಂದು ಭರ್ಜರಿ ಗೆಲುವಿನೊಂದಿಗೆ ಸಿಎಂ ಪಟ್ಟವೇರಲು ಸಜ್ಜಾಗಿದ್ದಾರೆ.
ಇತ್ತೀಚೆಗಷ್ಟೇ 2019ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟ ZPM ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 40 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ.
ಲಾಲ್ದುಹೋಮಾ 1984 ರಲ್ಲಿ ಕಾಂಗ್ರೆಸ್ ನಿಂದ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಸೋಲು ಅನುಭವಿಸಿದ್ದರು. ನಂತರ ಅದೇ ವರ್ಷ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1986ರಲ್ಲಿ ಆಗಿನ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಮತ್ತು ಕೆಲವು ಕ್ಯಾಬಿನೆಟ್ ಮಂತ್ರಿಗಳ ವಿರುದ್ಧ ಪಿತೂರಿ ನಡೆಸಿದ ಆರೋಪದ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
1988 ರಲ್ಲಿ ಕಾಂಗ್ರೆಸ್ ತೊರೆದ ಲಾಲ್ದುಹೋಮಾ ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರು. ಈ ಮೂಲಕ ಪಕ್ಷಾಂತರ-ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಂಡ ಮೊದಲ ಸಂಸದರು ಅವರಾಗಿದ್ದಾರೆ.
ನಂತರ ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ ಸ್ಥಾಪಿಸಿದ 73 ವರ್ಷದ ಲಾಲ್ದುಹೋಮಾ ಈಗ ಮಿಜೋರಾಂ ಮುಖ್ಯಮಂತ್ರಿಯಾಗಲಿದ್ದಾರೆ.
ಮೈತ್ರಿಕೂಟದ ಸಭೆಗೆ ಮಮತಾ ಬ್ಯಾನರ್ಜಿ ಗೈರು
ಕೋಲ್ಕತ್ತ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ INDIA ಮೈತ್ರಿಕೂಟದ ಸಭೆ ಡಿ.06 ರಂದು ನಡೆಯಲಿದ್ದು, ಕಾಂಗ್ರೆಸ್ ಸೋಲಿನ ಬಗ್ಗೆ ಮೈತ್ರಿಕೂಟದ ಸದಸ್ಯರು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಮಿತ್ರಪಕ್ಷಗಳೊಂದಿಗೆ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಸಲಹೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ತೀವ್ರವಾಗಿ ಕಾಂಗ್ರೆಸನ್ನು ಹಳಿದಿದ್ದಾರೆ. ಈ ಮಧ್ಯೆ ಈ ನಡುವೆ ಡಿ.06 ರ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗುವ ಸೂಚನೆ ನೀಡಿದ್ದಾರೆ.
ಅದೇ ದಿನದಂದು ಉತ್ತರ ಬಂಗಾಳದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ. INDIA ಮೈತ್ರಿಕೂಟದ ಸಭೆಯ ಬಗ್ಗೆ ನನಗೆ ಅರಿವಿಲ್ಲ. ಆದ್ದರಿಂದಲೇ ನಾನು ಉತ್ತರ ಬಂಗಾಳದಲ್ಲಿ ಹಲವು ಕಾರ್ಯಕ್ರಮಗಳಿಗೆ ತೆರಳುವುದು ನಿಗದಿಯಾಗಿದೆ ಎಂದು ಹೇಳಿದ್ದಾರೆ. ಸಭೆಯ ಬಗ್ಗೆ ಮಾಹಿತಿ ಇದ್ದಿದ್ದರೆ, ನಾನು ಖಂಡಿತವಾಗಿಯೂ ಅದಕ್ಕೆ ಹೋಗುತ್ತಿದ್ದೆ. ಆದರೆ ನಮಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾನು ಉತ್ತರ ಬಂಗಾಳ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ವಿವರಿಸಿದ್ದಾರೆ.
ಮಮತಾ ಬ್ಯಾನರ್ಜಿ ಈ ಹೇಳಿಕೆಯ ಬಳಕ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, ಈ ಸಭೆ ಅನೌಪಚಾರಿಕ ಸಭೆಯಾಗಿದೆ ಎಂದು ಹೇಳಿದ್ದಾರೆ.