ಹಸೆಮಣೆ ಏರಲು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಮಗನನ್ನೇ ಭೀಕರವಾಗಿ ಕೊಂದ ತಂದೆ..!
ಮಗನ ಮದುವೆಗೆ ಕೆಲವೇ ಗಂಟೆ ಬಾಕಿ ಇವೆ ಎಂದಾಗ ತಂದೆಯಾದವನು ಹೇಗಿರುತ್ತಾನೆ? ಮನದ ತುಂಬ ಖುಷಿ ಇರುತ್ತದೆ. ಎಲ್ಲ ಸಿದ್ಧತೆ ಬಗ್ಗೆ ಮೇಲ್ವಿಚಾರಣೆ, ಮನೆಗೆ ಬಂದ ನೆಂಟರನ್ನು ಸಂಭಾಳಿಸುವುದು, ಊಟೋಪಚಾರ ಸೇರಿ ಬಿಡುವಿಲ್ಲದ ಓಡಾಟ ಇರುತ್ತದೆ. ಆದರೆ, ದೆಹಲಿಯಲ್ಲಿ (Delhi) ವ್ಯಕ್ತಿಯೊಬ್ಬರು ತಮ್ಮ ಮಗನ ಮದುವೆಗೆ (Marriage) ಕೆಲವೇ ಗಂಟೆಗಳು ಬಾಕಿ ಇರುವಾಗಲೇ, ಆತನನ್ನು ಭೀಕರವಾಗಿ ಕೊಲೆ (Father Kills Son) ಮಾಡಿದ್ದಾರೆ. ಹಾಗಾಗಿ, ಇಡೀ ಮದುವೆ ಮನೆಯು ಮಸಣದಂತಾಗಿದೆ.
ಹೌದು, ಗುರುವಾರ ಬೆಳಗ್ಗೆ (ಮಾರ್ಚ್ 7) ಗೌರವ್ ಸಿಂಘಾಲ್ (29) ಅವರು ಹಸೆಮಣೆ ಏರುವವರಿದ್ದರು. ಮದುವೆಗೆ ಕೆಲವೇ ಗಂಟೆಗಳು ಇರುವಾಗಲೇ ಹೊಸದಾಗಿ ತಂದ ಸೂಟು, ಬೂಟು ಸೇರಿ ಎಲ್ಲ ವ್ಯವಸ್ಥೆ ಆಗಿದೆಯೇ ಎಂಬುದನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಬುಧವಾರ ರಾತ್ರಿ (ಮಾರ್ಚ್ 6) ಗೌರವ್ ಸಿಂಘಾಲ್ ಅವರ ತಂದೆ ರಂಗಲಾಲ್ ಅವರು ಮಗನ ಮೇಲೆಯೇ ದಾಳಿ ನಡೆಸಿದ್ದಾರೆ. ಮಗನಿಗೆ ಸುಮಾರು 15 ಬಾರಿ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಪ್ರಕರಣದ ಬಳಿಕ ಪೊಲೀಸರು ರಂಗಲಾಲ್ ಅವರನ್ನು ಬಂಧಿಸಿದ್ದಾರೆ.
Delhi Police has taken Gaurav Singhal's father into custody. According to the Police, the father killed Singhal. Initial investigation revealed that he was stabbed 15 times. His father was missing after the murder. During the probe, it came to light that the father and son did… https://t.co/cRwGn2UdfQ
— ANI (@ANI) March 8, 2024
ಮಗನನ್ನೇ ಕೊಲ್ಲಲು ಕಾರಣವೇನು?
ಜಿಮ್ ಮಾಲೀಕನಾಗಿರುವ ಗೌರವ್ ಸಿಂಘಾಲ್ ಅವರಿಗೆ ಮದುವೆ ಇಷ್ಟವಿರಲಿಲ್ಲ. ಆದರೆ, ರಂಗಲಾಲ್ ಅವರು ಪದೇಪದೆ ಒತ್ತಾಯಿಸಿದ ಕಾರಣ ಅವರು ಮದುವೆಗೆ ಒಪ್ಪಿದ್ದರು. ಇನ್ನು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಂಗಲಾಲ್ ಅವರನ್ನು ಗೌರವ್ ಸಿಂಘಾಲ್ ಅವರು ಅವಮಾನಿಸುತ್ತಿದ್ದರು. ಎಲ್ಲರ ಎದುರು ಮಗನಿಂದಲೇ ಅವಮಾನಕ್ಕೀಡಾದ ರಂಗಲಾಲ್ ಅವರು ಕುದ್ದುಹೋಗಿದ್ದರು. ಬುಧವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಕುಪಿತಗೊಂಡ ರಂಗಲಾಲ್ ಅವರು ಮಗನನ್ನೇ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
“ಬುಧವಾರ ರಾತ್ರಿ ದೆಹಲಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಬಂತು. ಕೊಲೆಯಾಗಿರುವ ವಿಷಯ ತಿಳಿದು ಪೊಲೀಸರು ರಂಗಲಾಲ್ ಅವರ ಮನೆಗೆ ಹೋದರು. ಗೌರವ್ ಸಿಂಘಾಲ್ ಶವವನ್ನು ಮನೆಯಲ್ಲೇ ಬಚ್ಚಿಡಲಾಗಿತ್ತು. ಪೊಲೀಸರು ವಿಚಾರಣೆ ನಡೆಸಿದ ಬಳಿಕ ರಂಗಲಾಲ್ ಅವರೇ ಮಗನನ್ನು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾಯಿತು. ಬಳಿಕ ಪೊಲೀಸರು ರಂಗಲಾಲ್ ಅವರನ್ನು ಬಂಧಿಸಿದರು” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಂದೆ-ಮಗನ ಸಂಬಂಧವು ಕೆಲ ತಿಂಗಳಿಂದ ಹಳಸಿತ್ತು ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.